ಶೇಖ್ ಹಸೀನಾರನ್ನು ಗಡೀಪಾರು ಮಾಡುವಂತೆ ಭಾರತಕ್ಕೆ ಬಾಂಗ್ಲಾದೇಶ ಮತ್ತೆ ಆಗ್ರಹ
ಶೇಖ್ ಹಸೀನಾ | Photo Credit : PTI
ಢಾಕ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಗಡೀಪಾರು ಮಾಡುವಂತೆ ಬಾಂಗ್ಲಾದೇಶ ಸೋಮವಾರ ತನ್ನ ಬೇಡಿಕೆಯನ್ನು ಮತ್ತೆ ಬಲವಾಗಿ ಮಂಡಿಸಿದೆ. ಹೊಸ ಪಾಸ್ಪೋರ್ಟ್ ನೀಡುವ ಬದಲು ಕಾನೂನು ಪ್ರಕ್ರಿಯೆಯ ಮೂಲಕವೇ ಅವರನ್ನು ದೇಶಕ್ಕೆ ಮರಳಿಸಲು ಬಯಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶ ಸರಕಾರದ ದೃಷ್ಟಿಯಲ್ಲಿ ಶೇಖ್ ಹಸೀನಾ ಒಬ್ಬ ತಲೆಮರೆಸಿಕೊಂಡಿರುವ ಅಪರಾಧಿ ಹಾಗೂ ಅವರಿಗೆ ಮರಣದಂಡನೆ ಶಿಕ್ಷೆಯಾಗಿದೆ, ಹೀಗಾಗಿ ಅವರಿಗೆ ಪಾಸ್ಪೋರ್ಟ್ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಾಂಗ್ಲಾದೇಶದ ವಿದೇಶಾಂಗ ರಾಜ್ಯ ಸಚಿವ ಹುಮಾಯೂನ್ ಕಬೀರ್ ಹೇಳಿದ್ದಾರೆ. ಬಾಂಗ್ಲಾದೇಶ ಮತ್ತು ಭಾರತದ ನಡುವೆ ಈಗಾಗಲೇ ಗಡೀಪಾರು ಒಪ್ಪಂದವಿದ್ದು ಅದರ ನಿಯಮಗಳ ಅಡಿಯಲ್ಲೇ ಹಸೀನಾ ಅವರನ್ನು ಹಸ್ತಾಂತರಿಸಬೇಕು. ಅಲ್ಲದೆ, ಸಾಮಾನ್ಯ ಪ್ರಯಾಣಿಕರಂತೆ ದೇಶಕ್ಕೆ ಮರಳಲು ಅವರಿಗೆ ಪಾಸ್ಪೋರ್ಟ್ ಅಗತ್ಯವಿಲ್ಲ ಎಂದು ಕಬೀರ್ ತಿಳಿಸಿದ್ದಾರೆ.
ಹಸೀನಾ ಅವರು ತಮ್ಮ ವಕೀಲರ ಮೂಲಕ ಬಾಂಗ್ಲಾದೇಶದ ಪಾಸ್ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯನ್ನು ಮರುಪಡೆಯಲು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.