Indonesia | ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್ ಪತನ; ಒಬ್ಬರು ಮೃತ್ಯು
ಒಂದು ವಾರದೊಳಗೆ ಇಂಡೋನೇಷ್ಯಾದಲ್ಲಿ ಎರಡನೇ ಹೆಲಿಕಾಪ್ಟರ್ ದುರಂತ
Photo Credit: AFP
ಜಕಾರ್ತ: ಇಂಡೋನೇಷ್ಯಾದ ದಕ್ಷಿಣ ಕಾಲಿಮಂಟನ್ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆ ವೇಳೆ H225 ಸೂಪರ್ ಪೂಮಾ ಹೆಲಿಕಾಪ್ಟರ್ ಬರಿಟೊ ನದಿಗೆ ಬಿದ್ದು ಪತನಗೊಂಡಿದ್ದು, ಇಂಡೋನೇಷ್ಯಾದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ ಎಂದು independent.co.uk ವರದಿ ಮಾಡಿದೆ.
ರವಿವಾರ ನ. 8ರಂದು ಬರಿಟೊ ಕೌಲಾ ಜಿಲ್ಲೆಯ ಬರಿಟೊ ನದಿಯಲ್ಲಿ ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆಗಾಗಿ ನೀರು ಸಂಗ್ರಹಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೃತರನ್ನು ಇಂಡೋನೇಷ್ಯಾದ ಪ್ರಜೆ ಯಾಯನ್ ಸುಪ್ಯನ್ಸುರಿ ಎಂದು ಗುರುತಿಸಲಾಗಿದೆ. ಅವರು ಹೆಲಿಕಾಪ್ಟರ್ ನಲ್ಲಿ ನ್ಯಾವಿಗೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುರಿಪನ್ ಜಿಲ್ಲೆಯ ತಬಟನ್ ಗ್ರಾಮದ ಸಮೀಪ ಸ್ಥಳೀಯ ಕಾಲಮಾನ ಸಂಜೆ 6.08ಕ್ಕೆ ಜಂಟಿ ಶೋಧ ಮತ್ತು ರಕ್ಷಣಾ ತಂಡ ಅವರ ಮೃತದೇಹವನ್ನು ಪತ್ತೆಹಚ್ಚಿದೆ.
ಅಪಘಾತದಲ್ಲಿ ಬದುಕುಳಿದವರನ್ನು ಆಸ್ಟ್ರೇಲಿಯಾದ ಮೈಕೆಲ್ ಜಾನ್ ಬೆಟರ್ರಿಡ್ಜ್ ಮತ್ತು ನ್ಯೂಝಿಲೆಂಡ್ನ ಹಗ್ ಆಂಡ್ರ್ಯೂ ಜಾನ್ ಪೇಜ್ ಎಂದು ಗುರುತಿಸಲಾಗಿದೆ. ಅಪಘಾತ ನಡೆದ ತಕ್ಷಣವೇ ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲಿಕಾಪ್ಟರ್ ನಲ್ಲಿದ್ದ ಮೂವರ ಗುರುತನ್ನು ಅಧಿಕಾರಿಗಳು ದೃಢಪಡಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.
VH-HGM ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್, ಕಾಡ್ಗಿಚ್ಚಿನಿಂದ ತೀವ್ರವಾಗಿ ಬಾಧಿತವಾಗಿರುವ ಪ್ರಾಂತ್ಯದಲ್ಲಿ ವೈಮಾನಿಕ ಅಗ್ನಿಶಾಮಕ ಕಾರ್ಯಾಚರಣೆಗೆ ನೆರವು ನೀಡಲು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಕಂಪೆನಿಗೆ ಸೇರಿತ್ತು.
ಹೆಲಿಕಾಪ್ಟರ್ ಬರಿಟೊ ನದಿಯ ಮೇಲೆ ಹಾರಾಡುತ್ತಿರುವ ಹಾಗೂ ಅಗ್ನಿಶಾಮಕ ಕಾರ್ಯಾಚರಣೆಗೆ ಬಳಸುವ ಬಕೆಟ್ ನಲ್ಲಿ ನೀರು ಸಂಗ್ರಹಿಸಲು ಕೆಳಗಿಳಿಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವೇಳೆ ಹೆಲಿಕಾಪ್ಟರ್ ನೀರಿನಲ್ಲಿ ಮುಳುಗುತ್ತಿರುವುದೂ ದೃಶ್ಯಗಳಲ್ಲಿ ಸೆರೆಯಾಗಿದೆ. ಬಳಿಕ ರಕ್ಷಣಾ ತಂಡಗಳು ದೋಣಿಗಳ ಮೂಲಕ ಭಾಗಶಃ ಮುಳುಗಿದ್ದ ಹೆಲಿಕಾಪ್ಟರ್ ಅನ್ನು ತಲುಪಿವೆ.
► ಒಂದು ವಾರದೊಳಗೆ ಎರಡನೇ ದುರಂತ
ಇಂಡೋನೇಷ್ಯಾದಲ್ಲಿ ಒಂದು ವಾರದೊಳಗೆ ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದು ಇದು ಎರಡನೇ ಘಟನೆ.
ಕಳೆದ ಬುಧವಾರ ಸೆಂಟ್ರಲ್ ಕಾಲಿಮಂಟನ್ ನಲ್ಲಿ ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆ ವೇಳೆ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಮೂವರು ಮೃತಪಟ್ಟಿದ್ದರು. ತೀವ್ರ ಅಳಿವಿನಂಚಿನಲ್ಲಿರುವ ಬೋರ್ನಿಯನ್ ಒರಾಂಗುಟನ್ ಗಳ ಪ್ರಮುಖ ಆವಾಸಸ್ಥಾನವಾಗಿರುವ ತಂಜುಂಗ್ ಪುಟಿಂಗ್ ರಾಷ್ಟ್ರೀಯ ಉದ್ಯಾನವನದ ಸಮೀಪ ನೀರು ಸಂಗ್ರಹಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ದುರಂತ ಸಂಭವಿಸಿತ್ತು. ಈ ಅಪಘಾತದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮಿಲಿಟರಿ ತಿಳಿಸಿದೆ.
► ಹಲವು ತಿಂಗಳಿಂದ ತೀವ್ರ ಕಾಡ್ಗಿಚ್ಚು
ಇಂಡೋನೇಷ್ಯಾದ ಸುಮಾತ್ರಾ, ಕಾಲಿಮಂಟನ್ ಮತ್ತು ಪಪುವಾದ ಕೆಲವು ಭಾಗಗಳಲ್ಲಿ ಹಲವು ತಿಂಗಳಿಂದ ವ್ಯಾಪಕ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬೆಂಕಿಯಿಂದ ಉಂಟಾಗುತ್ತಿರುವ ದಟ್ಟ ಹೊಗೆ ದೇಶದ ಗಡಿಗಳನ್ನು ದಾಟಿ ನೆರೆಯ ಮಲೇಷ್ಯಾ, ಸಿಂಗಾಪುರ ಮತ್ತು ಟಿಮೋರ್-ಲೆಸ್ಟೆ ದೇಶಗಳ ಮೇಲೂ ಪರಿಣಾಮ ಬೀರಿದೆ.
ಸಾಮಾನ್ಯವಾಗಿ ಇಂಡೋನೇಷ್ಯಾದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗುವ ಪ್ರಬಲ ಎಲ್ ನಿನೊ ಹವಾಮಾನ ವಿದ್ಯಮಾನಕ್ಕೆ ಸಂಬಂಧಿಸಿದ ಬರ ಪರಿಸ್ಥಿತಿಯಿಂದಾಗಿ ಕಾಡ್ಗಿಚ್ಚನ್ನು ನಿಯಂತ್ರಿಸುವುದು ಸವಾಲಾಗಿದೆ.
ಕಾಡ್ಗಿಚ್ಚು ನಿಯಂತ್ರಿಸಲು ಇಂಡೋನೇಷ್ಯಾ ತಳಮಟ್ಟದ ಸಿಬ್ಬಂದಿ ಹಾಗೂ ವಿಮಾನಗಳನ್ನು ನಿಯೋಜಿಸಿದೆ. ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ವಿದೇಶಿ ಸರ್ಕಾರಗಳೂ ಅಗ್ನಿಶಾಮಕ ಕಾರ್ಯಾಚರಣೆಗೆ ನೆರವು ನೀಡಿವೆ.
ಕಾಡ್ಗಿಚ್ಚಿನಿಂದ ಉಂಟಾದ ಹೊಗೆಯ ಪರಿಣಾಮವಾಗಿ ಸೆಪ್ಟೆಂಬರ್ ತಿಂಗಳೊಂದರಲ್ಲೇ ಅಂದಾಜು 3,560 ಮಂದಿ ಮೃತಪಟ್ಟಿದ್ದಾರೆ. ಇದು ಆಗಸ್ಟ್ನಲ್ಲಿ ದಾಖಲಾದ ಅಂದಾಜು ಸಾವಿನ ಸಂಖ್ಯೆಯ ದುಪ್ಪಟ್ಟು ಪ್ರಮಾಣ. ಸೆಪ್ಟೆಂಬರ್ನಲ್ಲಿ ಇಂಡೋನೇಷ್ಯಾದಲ್ಲಿ ವಾಯುಮಾಲಿನ್ಯದಿಂದ ಸಂಭವಿಸಿದ ಒಟ್ಟು 5,310 ಸಾವುಗಳ ಪೈಕಿ ಸುಮಾರು ಮೂರನೇ ಎರಡರಷ್ಟು ಸಾವುಗಳಿಗೆ ಕಾಡ್ಗಿಚ್ಚಿನ ಹೊಗೆಯೇ ಕಾರಣ ಎಂದು ತಿಳಿದು ಬಂದಿದೆ.