ಇರಾನ್ ಯುದ್ಧದ ಜವಾಬ್ದಾರಿ ಹೊತ್ತಿರುವ ಹೆಗ್ಸೆತ್ರನ್ನು ಏಕೆ ವಜಾಗೊಳಿಸಬೇಕು: ಟ್ರಂಪ್ ಪ್ರಶ್ನೆ
Photo Credit: PTI
ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ವಾಗ್ದಂಡನೆ ವಿಚಾರಣೆಗೆ ಒಳಪಡಿಸುವ ಆಗ್ರಹವನ್ನು ತೀವ್ರವಾಗಿ ವಿರೋಧಿಸಿದ್ದು, ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಪ್ರಮುಖ ಜವಾಬ್ದಾರಿ ಹೊತ್ತಿರುವ ಅಧಿಕಾರಿಯನ್ನು ಏಕೆ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಇರಾನ್ ವಿರುದ್ಧ ತಮ್ಮ ಆಡಳಿತ ತೆಗೆದುಕೊಂಡ ಮಿಲಿಟರಿ ಕ್ರಮವನ್ನು ಸಮರ್ಥಿಸಿಕೊಂಡ ಟ್ರಂಪ್ ಅಮೆರಿಕ ನಡೆಸಿದ ದಾಳಿಗಳು ಇರಾನ್ನ ಪರಮಾಣು ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿವೆ ಮತ್ತು ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆದಿವೆ. ನಾವು ಇಸ್ರೇಲ್ ಮತ್ತು ಮಧ್ಯಪ್ರಾಚ್ಯವನ್ನು ಉಳಿಸಿದ್ದೇವೆ. ನಾವು ಇರಾನ್ನಿಂದ ರಕ್ಷಿಸದೇ ಇದ್ದಿದ್ದರೆ ಇಸ್ರೇಲ್ ಎಂಬ ದೇಶವೇ ಇರುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.
ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ್ದಾರೆ ಮತ್ತು ಇರಾನ್ ವಿರುದ್ಧದ ಯುದ್ಧವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರಿಸ್, ಹೆಗ್ಸೆತ್ರನ್ನು ವಾಗ್ದಂಡನೆ ವಿಚಾರಣೆಗೆ ಒಳಪಡಿಸುವ ಪ್ರಯತ್ನಗಳಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.