ಉತ್ತಮ ಉದ್ಯೋಗದಲ್ಲಿದ್ದವರನ್ನೂ ಗಡೀಪಾರು ಮಾಡಿದ್ದು ತಪ್ಪಾಯಿತು; ಮರುಪರಿಶೀಲನೆಗೆ ಸಿದ್ಧ: ಡೊನಾಲ್ಡ್ ಟ್ರಂಪ್
ವಲಸೆ ನೀತಿ ಕಠಿಣವಾದ ನಿರ್ಧಾರವಾಗಿತ್ತು ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿದ್ದ ವಲಸಿಗರನ್ನು ಸಾಮೂಹಿಕವಾಗಿ ಗಡೀಪಾರು ಮಾಡುವ ತಮ್ಮ ಸರಕಾರದ ನೀತಿ ಕಠಿಣವಾಗಿತ್ತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಉತ್ತಮ ಉದ್ಯೋಗ ಹೊಂದಿದ್ದವರನ್ನೂ ದೇಶದಿಂದ ಹೊರಹಾಕಿದ್ದು ರಿಪಬ್ಲಿಕನ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
ರವಿವಾರ 'ಸಿಬಿಎಸ್ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ತಮ್ಮ ವಲಸೆ ನೀತಿಗಳು ಪಕ್ಷದ ಚುನಾವಣಾ ಸೋಲಿಗೆ ಭಾಗಶಃ ಕಾರಣವಾಗಿರಬಹುದು ಎಂದು ಒಪ್ಪಿಕೊಂಡರು.
"ಗಡಿಯನ್ನು ಬಂದ್ ಮಾಡಿದ್ದಕ್ಕಾಗಿ ನನಗೆ 'ಎ+' ಶ್ರೇಣಿ ನೀಡಬಹುದು. ಅಪರಾಧ ಹಿನ್ನೆಲೆಯುಳ್ಳವರನ್ನು ದೇಶದಿಂದ ಹೊರಹಾಕಿದ್ದಕ್ಕಾಗಿ ಉತ್ತಮ ಅಂಕಗಳು ಸಿಗುತ್ತವೆ. ಆದರೆ ಉತ್ತಮ ಉದ್ಯೋಗ ಹೊಂದಿದ್ದವರನ್ನೂ ನಾವು ಗಡೀಪಾರು ಮಾಡಿದ್ದೇವೆ. ಅವರು ಮಾಡಿದ್ದ ಏಕೈಕ ತಪ್ಪೆಂದರೆ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು. ಇಂತಹವರನ್ನು ಹೊರಹಾಕಿದ್ದು ನಮಗೆ ಹಿನ್ನಡೆಯಾಯಿತು" ಎಂದು ಟ್ರಂಪ್ ಹೇಳಿದರು.
ಜನವರಿ 2025ರಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಟ್ರಂಪ್ ಆಡಳಿತವು ವಲಸಿಗರ ವಿರುದ್ಧ ವ್ಯಾಪಕ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಎರಡೂ ಸದನಗಳಲ್ಲಿ ರಿಪಬ್ಲಿಕನ್ ಗಳಿಗೆ ಹಿನ್ನಡೆ
ನ. 3ರಂದು ನಡೆದ ಮಧ್ಯಂತರ ಚುನಾವಣೆಗೆ ಮೊದಲು 100 ಸದಸ್ಯ ಬಲದ ಸೆನೆಟ್ ನಲ್ಲಿ ರಿಪಬ್ಲಿಕನ್ ಪಕ್ಷವು 53 ಸ್ಥಾನಗಳನ್ನು ಹೊಂದಿತ್ತು. ಡೆಮಾಕ್ರಟ್ ಗಳ ಬಳಿ 47 ಸ್ಥಾನಗಳಿದ್ದವು. 435 ಸದಸ್ಯ ಬಲದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ರಿಪಬ್ಲಿಕನ್ ಪಕ್ಷಕ್ಕೆ 219 ಮತ್ತು ಡೆಮಾಕ್ರಟ್ ಗಳಿಗೆ 214 ಸ್ಥಾನಗಳಿದ್ದವು.
ಚುನಾವಣೆಯ ಬಳಿಕ ಸೆನೆಟ್ ನಲ್ಲಿ ಡೆಮಾಕ್ರಟ್ ಗಳು 54 ಸ್ಥಾನಗಳನ್ನು ಹಾಗೂ ರಿಪಬ್ಲಿಕನ್ ಗಳು 44 ಸ್ಥಾನಗಳನ್ನು ಹೊಂದಿದ್ದಾರೆ. ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಡೆಮಾಕ್ರಟ್ ಗಳು 254 ಸ್ಥಾನಗಳನ್ನು ಮತ್ತು ರಿಪಬ್ಲಿಕನ್ಗಳು 162 ಸ್ಥಾನಗಳನ್ನು ಗೆದ್ದಿದ್ದಾರೆ. ಬಹುಮತ ಪಡೆಯಲು 218 ಸ್ಥಾನಗಳ ಅಗತ್ಯವಿದ್ದು, ಇನ್ನೂ 19 ಸ್ಥಾನಗಳ ಫಲಿತಾಂಶ ಪ್ರಕಟವಾಗಬೇಕಿದೆ.
ಈ ಚುನಾವಣೆಯನ್ನು ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದ ಮೇಲಿನ ಜನರ ತೀರ್ಪು ಎಂದು ಪರಿಗಣಿಸಲಾಗಿದೆ. ಅಮೆರಿಕದಲ್ಲಿ ದೈನಂದಿನ ವೆಚ್ಚಗಳ ಹೆಚ್ಚಳ, ಟ್ರಂಪ್ ವಿಧಿಸಿದ ಆಮದು ಸುಂಕಗಳಿಂದ ಆರ್ಥಿಕ ಅಸ್ಥಿರತೆ ಉಂಟಾಗಿರುವುದು ಹಾಗೂ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧದಿಂದ ಜಾಗತಿಕ ತೈಲ ಬೆಲೆ ಏರಿಕೆಯಾಗಿರುವುದು ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಜನಪ್ರಿಯತೆ ಕುಸಿಯಲು ಕಾರಣ ಎನ್ನಲಾಗಿದೆ.
ಐತಿಹಾಸಿಕವಾಗಿ, ಅಮೆರಿಕದ ಅಧ್ಯಕ್ಷರ ಎರಡನೇ ಅವಧಿಯಲ್ಲಿ ಅವರ ಪಕ್ಷವು ಕಾಂಗ್ರೆಸ್ ನ ಎರಡೂ ಸದನಗಳಲ್ಲಿ ಬಹುಮತ ಕಳೆದುಕೊಳ್ಳುವ ಪ್ರವೃತ್ತಿ ಇದೆ. ಕಾಂಗ್ರೆಸ್ ನ ನಿಯಂತ್ರಣ ಡೆಮಾಕ್ರಟ್ ಗಳಿಗೆ ಸಿಗುತ್ತಿರುವುದರಿಂದ ಟ್ರಂಪ್ ಆಡಳಿತದ ಉಳಿದ ಎರಡು ವರ್ಷಗಳಲ್ಲಿ ಸರಕಾರದ ಕಾರ್ಯವೈಖರಿಯ ಮೇಲೆ ಹೆಚ್ಚಿನ ನಿಗಾ ಮತ್ತು ಪರಿಶೀಲನೆ ನಡೆಯುವ ನಿರೀಕ್ಷೆಯಿದೆ.
ವಲಸಿಗರಿಗೆ ಕಾನೂನುಬದ್ಧ ಸ್ಥಾನಮಾನ ನೀಡಲು ಸಿದ್ಧ
ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರೂ ಪ್ರಸ್ತುತ ತೆರಿಗೆ ಪಾವತಿಸುತ್ತಾ ಉದ್ಯೋಗ ಮಾಡುತ್ತಿರುವ ವಲಸಿಗರಿಗೆ ಕಾನೂನುಬದ್ಧ ಸ್ಥಾನಮಾನ ಕಲ್ಪಿಸುವ ಒಪ್ಪಂದವೊಂದರ ಕುರಿತು ಡೆಮಾಕ್ರಟ್ ಗಳೊಂದಿಗೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಪ್ರಸ್ತಾವನೆ ಕುರಿತು ಡೆಮಾಕ್ರಟ್ ಗಳು ಚರ್ಚೆಗೆ ಒಪ್ಪಬಹುದೇ ಎಂಬ ಪ್ರಶ್ನೆಗೆ, "ಜನರು ಈಗಾಗಲೇ ನನಗೆ ಕರೆ ಮಾಡಿದ್ದಾರೆ" ಎಂದು ಅವರು ಉತ್ತರಿಸಿದ್ದಾರೆ.
ಆದರೆ, ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಶುಕ್ರವಾರ ಟ್ರಂಪ್ ತಮ್ಮ ವಲಸೆ ನೀತಿಯ ಪ್ರಮುಖ ರೂವಾರಿ ಸ್ಟೀಫನ್ ಮಿಲ್ಲರ್ ಅವರನ್ನು 'ಚೀಫ್ ಆಫ್ ಸ್ಟಾಫ್' (ಮುಖ್ಯ ಸಿಬ್ಬಂದಿ ಅಧಿಕಾರಿ) ಆಗಿ ನೇಮಿಸಿಕೊಂಡಿದ್ದಾರೆ.
ವಿದೇಶಿ ವಿದ್ಯಾರ್ಥಿಗಳಿಗೂ ಕಠಿಣ ನಿಯಮ
ದಾಖಲೆಗಳಿಲ್ಲದ ವಲಸಿಗರನ್ನು ಮಿಲಿಟರಿ ವಿಮಾನಗಳ ಮೂಲಕ ಗಡೀಪಾರು ಮಾಡುವುದು, ಉದ್ಯೋಗ ಆಧಾರಿತ 'ಗ್ರೀನ್ ಕಾರ್ಡ್' ಕಾರ್ಯಕ್ರಮವನ್ನು ಅಮಾನತುಗೊಳಿಸುವುದು ಟ್ರಂಪ್ ಆಡಳಿತದ ಪ್ರಮುಖ ಕ್ರಮಗಳಾಗಿವೆ.
ಅಮೆರಿಕದ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುವ ವಿದೇಶಿ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಭದ್ರತಾ ಪರಿಶೀಲನೆ ವಿಧಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ವೀಸಾಗಳ ಅವಧಿಯನ್ನು ಮಿತಿಗೊಳಿಸುವ ಹೊಸ ನಿಯಮಗಳನ್ನೂ ಪ್ರಸ್ತಾಪಿಸಲಾಗಿದೆ.
2025ರ ಆಗಸ್ಟ್ ನಲ್ಲಿ ಮಾನ್ಯ ವೀಸಾ ಹೊಂದಿರುವ 5.5 ಕೋಟಿಗೂ ಹೆಚ್ಚು ಜನರ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಟ್ರಂಪ್ ಆಡಳಿತ ತಿಳಿಸಿತ್ತು. ವೀಸಾ ನಿಯಮಗಳನ್ನು ಉಲ್ಲಂಘಿಸಿರುವವರನ್ನು ಗುರುತಿಸಿ, ಗಡೀಪಾರು ಮಾಡಲು ಅರ್ಹರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದು ಇದರ ಉದ್ದೇಶವಾಗಿತ್ತು.
4,700ಕ್ಕೂ ಹೆಚ್ಚು ಭಾರತೀಯರ ಗಡೀಪಾರು
2025ರ ಆರಂಭದಿಂದ ಅಮೆರಿಕವು 4,700ಕ್ಕೂ ಹೆಚ್ಚು ಭಾರತೀಯರನ್ನು ಗಡೀಪಾರು ಮಾಡಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜೂನ್ ನಲ್ಲಿ ತಿಳಿಸಿತ್ತು. ಇವರಲ್ಲಿ 2025ರಲ್ಲಿ 3,570ಕ್ಕೂ ಹೆಚ್ಚು ಮಂದಿ ಹಾಗೂ 2026ರಲ್ಲಿ ಆ ಸಮಯದವರೆಗೆ 1,170ಕ್ಕೂ ಹೆಚ್ಚು ಮಂದಿ ಗಡೀಪಾರಾಗಿದ್ದರು.
ಗಡೀಪಾರು ಪ್ರಕ್ರಿಯೆ ಆರಂಭವಾದ ಸಂದರ್ಭದಲ್ಲಿ ಭಾರತೀಯರನ್ನು ಅಮೆರಿಕದ ಮಿಲಿಟರಿ ವಿಮಾನಗಳಲ್ಲಿ ಸರಪಳಿಗಳಿಂದ ಬಂಧಿಸಿ ಕರೆತರುತ್ತಿರುವ ವಿಡಿಯೋಗಳು ಬಹಿರಂಗವಾಗಿದ್ದವು. ಈ ದೃಶ್ಯಗಳು ದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಭಾರತದ ವಿರೋಧ ಪಕ್ಷಗಳು ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದ್ದವು.
ಆದರೆ, 2025ರ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಗಡೀಪಾರುಗೊಂಡ ಭಾರತೀಯರಿಗೆ ಸರಪಳಿ ಹಾಕಿರುವುದು ಅಮೆರಿಕದ ಹಿಂದಿನಿಂದಲೂ ನಡೆದುಬಂದಿರುವ ಕಾರ್ಯವಿಧಾನಕ್ಕೆ ಅನುಗುಣವಾಗಿಯೇ ನಡೆದಿದೆ ಎಂದು ಸ್ಪಷ್ಟಪಡಿಸಿದ್ದರು.