ಜೆನ್ಸನ್ ಹುವಾಂಗ್ ಗೂಢಚಾರಿಕೆ ಆರೋಪ: ಅಮೆರಿಕದ ಮಾಧ್ಯಮಗಳ ವರದಿ ಖಂಡಿಸಿದ ಚೀನಾ
'ವಿವಾಹೇತರ ಸಂಬಂಧವನ್ನು ಚೀನಾದ ಗೂಢಚಾರಿಕೆಯೊಂದಿಗೆ ಜೋಡಿಸುವುದು ಆಧಾರರಹಿತ'
Photo: X.com/SMB_Attorney
ಬೀಜಿಂಗ್: Nvidia ಸಿಇಒ ಜೆನ್ಸನ್ ಹುವಾಂಗ್ ಅವರ ವಿವಾಹೇತರ ಸಂಬಂಧದ ಹಿಂದೆ ಚೀನಾದ ಗೂಢಚಾರಿಕೆ ಇದೆ ಎಂಬ ಅಮೆರಿಕದ ಮಾಧ್ಯಮಗಳ ವರದಿಯನ್ನು ಚೀನಾ ತೀವ್ರವಾಗಿ ಖಂಡಿಸಿದೆ. ಈ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಹುವಾಂಗ್ ಅವರ ವೈಯಕ್ತಿಕ ವಿಚಾರದಲ್ಲಿ ಚೀನಾವನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ಸೋಮವಾರ ಹೇಳಿದೆ.
ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧ ಸುಧಾರಿಸುತ್ತಿರುವ ಸಂದರ್ಭದಲ್ಲಿ ಇಂತಹ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ರೀತಿಯ ವರದಿಗಳು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರದ ಸಹಕಾರಕ್ಕೆ ಧಕ್ಕೆ ತರಬಹುದು ಎಂದು ಪತ್ರಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ಹುವಾಂಗ್ ವಿರುದ್ಧದ ಗೂಢಚಾರಿಕೆ ಆರೋಪಗಳನ್ನು ಚೀನಾ ಸರಕಾರವೂ ನಿರಾಕರಿಸಿದೆ. ಆರೋಪಗಳು ಸಂಪೂರ್ಣ ಆಧಾರರಹಿತವಾಗಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚೀನಾದ ಗೂಢಚಾರರೆಂದು ಕರೆಯಲಾಗುತ್ತಿರುವವರ ಕುರಿತ ಆರೋಪಗಳು ಆಧಾರರಹಿತವಾಗಿವೆ. ಇದು ಚೀನಾಕ್ಕೆ ಮಸಿ ಬಳಿಯುವ ಪ್ರಯತ್ನ" ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿಗೆ ಚೀನಾ ಆಕ್ಷೇಪ
ಜೆನ್ಸನ್ ಹುವಾಂಗ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ಚೀನಾದ ಗೂಢಚಾರಿಯಾಗಿದ್ದರು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಈ ವರದಿಯು ಊಹಾಪೋಹಗಳನ್ನು ಆಧರಿಸಿದೆ ಎಂದು ಗ್ಲೋಬಲ್ ಟೈಮ್ಸ್ ಟೀಕಿಸಿದೆ.
ಒಬ್ಬ ಪ್ರಮುಖ ಉದ್ಯಮಿಯ ವಿವಾಹೇತರ ಸಂಬಂಧಕ್ಕೆ ವಿದೇಶಿ ಗೂಢಚಾರಿಕೆಯ ಬಣ್ಣ ಬಳಿದು ಅಮೆರಿಕದ ಮಾಧ್ಯಮಗಳು ದೊಡ್ಡ ವಿವಾದ ಸೃಷ್ಟಿಸಿವೆ. ಹುವಾಂಗ್ ತಮ್ಮ ವಿವಾಹೇತರ ಸಂಬಂಧವನ್ನು ಒಪ್ಪಿಕೊಂಡಿರುವುದನ್ನೇ ಚೀನಾ ಸರಕಾರದ ಬೇಹುಗಾರಿಕೆಗೆ ಸಾಕ್ಷಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪತ್ರಿಕೆ ಆರೋಪಿಸಿದೆ.
ಏಷ್ಯ ಮೂಲದವರಂತೆ ಹೋಲುವ ಮಹಿಳೆಯ ಮುಖಚಹರೆಯ ಚಿತ್ರಗಳು, ಚೀನಾದ ಮೇಲಿನ ವ್ಯಾಪಾರ ನಿರ್ಬಂಧಗಳನ್ನು ಸಡಿಲಗೊಳಿಸಲು Nvidia ಈ ಹಿಂದೆ ನಡೆಸಿದ್ದ ಪ್ರಯತ್ನಗಳು ಮತ್ತು ಅನಾಮಧೇಯ ಮೂಲಗಳಿಂದ ಬಂದ ಮಾಹಿತಿಗಳನ್ನು ಆಧರಿಸಿ ಈ ಆರೋಪಗಳನ್ನು ಮಾಡಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
"ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧ ಸುಧಾರಿಸಲು ಆರಂಭಿಸಿದಾಗಲೆಲ್ಲ ಇಂತಹ ಆರೋಪಗಳು ಕೇಳಿಬರುತ್ತವೆ. ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ" ಎಂದು ಪತ್ರಿಕೆ ಉಲ್ಲೇಖಿಸಿದೆ.
2023ರಲ್ಲಿ ಚೀನಾದ ಬಲೂನ್ ಅಮೆರಿಕದ ವಾಯುಪ್ರದೇಶದಲ್ಲಿ ಕಾಣಿಸಿಕೊಂಡಿದ್ದರಿಂದ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಈ ಘಟನೆಯನ್ನು ಉಲ್ಲೇಖಿಸಿರುವ ಗ್ಲೋಬಲ್ ಟೈಮ್ಸ್, ಹುವಾಂಗ್ ಅವರ ಪ್ರಕರಣವು ಅಮೆರಿಕದ ಆಂತರಿಕ ಕಾರ್ಪೊರೇಟ್ ಮತ್ತು ವೈಯಕ್ತಿಕ ವಿಚಾರವಾಗಿದೆ. ಅದಕ್ಕೆ ಚೀನಾವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದೆ.
ಇಂತಹ ಚೀನಾ ವಿರೋಧಿ ಆರೋಪಗಳು ಉಭಯ ದೇಶಗಳ ನಡುವಿನ ಸಾಮಾನ್ಯ ವ್ಯಾಪಾರ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಅಡ್ಡಿಯಾಗಲಿವೆ. ಇದರಿಂದ ಎರಡೂ ದೇಶಗಳಿಗೂ ನಷ್ಟವಾಗಲಿದೆ ಎಂದು ಪತ್ರಿಕೆ ಎಚ್ಚರಿಸಿದೆ.
ವಿವಾಹೇತರ ಸಂಬಂಧ ಒಪ್ಪಿಕೊಂಡ ಹುವಾಂಗ್
ಚೀನಾದ ಗುಪ್ತಚರ ಇಲಾಖೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿರುವ ಮಹಿಳೆಯೊಂದಿಗಿನ ವಿವಾಹೇತರ ಸಂಬಂಧವನ್ನು ಜೆನ್ಸನ್ ಹುವಾಂಗ್ ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ Nvidia ಆಡಳಿತ ಮಂಡಳಿಯು ರವಿವಾರ ಅವರ ವಿರುದ್ಧ ತನಿಖೆ ಆರಂಭಿಸಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿಂಗಪುರ ಮೂಲದ ಡೇಟಾ ಸೆಂಟರ್ ಕಂಪೆನಿಯೊಂದರೊಂದಿಗೆ ಸಂಪರ್ಕ ಹೊಂದಿದ್ದ ಚೀನಾದ ಕಾರ್ಯನಿರ್ವಾಹಕಿ ಆಲಿಸ್ ಹುವಾಂಗ್ ಅವರನ್ನು ಬಂಧಿಸಲು ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅವರು ಚೀನಾಕ್ಕೆ ಮಾಹಿತಿಯನ್ನು ರವಾನಿಸುತ್ತಿದ್ದರು ಎಂಬುದಾಗಿ ದಿ ನ್ಯೂಯಾರ್ಕ್ ಟೈಮ್ಸ್ ಕಳೆದ ತಿಂಗಳು ವರದಿ ಮಾಡಿತ್ತು.
ರವಿವಾರ ಕಂಪೆನಿಯ ಉದ್ಯೋಗಿಗಳಿಗೆ ಸಂದೇಶ ಕಳುಹಿಸಿದ ಹುವಾಂಗ್, ತಮ್ಮ ವಿವಾಹೇತರ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಬಳಿಕ ತಮ್ಮ ಕುಟುಂಬದ ಸದಸ್ಯರು ಮತ್ತು ಕಂಪೆನಿಯ ಸಿಬ್ಬಂದಿಯ ಬಳಿ ಅವರು ಕ್ಷಮೆಯಾಚಿಸಿದ್ದಾರೆ.