Bangladesh | 2009ರ ಹತ್ಯೆಗಳಿಗೆ ಹಸೀನಾ ಆದೇಶ ನೀಡಿದ್ದರು: ತನಿಖಾ ಆಯೋಗದ ಗಂಭೀರ ಆರೋಪ
PC: x.com/albd1971
ಢಾಕಾ: ಬಾಂಗ್ಲಾದೇಶದಲ್ಲಿ 2009ರಲ್ಲಿ ಬಾಂಗ್ಲಾದೇಶ ರೈಫಲ್ಸ್ (BDR) ಪಡೆಯ ಸದಸ್ಯರ ದಂಗೆಯಲ್ಲಿ ಹಿರಿಯ ಸೇನಾ ಅಧಿಕಾರಿಗಳೂ ಸೇರಿದಂತೆ 74 ಮಂದಿ ಹತ್ಯೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಆಯೋಗವು, ಮಾಜಿ ಪ್ರಧಾನಿ ಶೇಖ್ ಹಸೀನಾ ನೇರವಾಗಿ ಆದೇಶ ನೀಡಿದ್ದಾರೆ ಎಂದು ತನಿಖಾ ಆಯೋಗದ ಅಂತಿಮ ವರದಿ ಹೇಳಿದೆ. ವರದಿಯನ್ನು ನ. 30 ರಂದು ರವಿವಾರ ಮಧ್ಯಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಫೆಬ್ರವರಿ 2009ರಲ್ಲಿ ಢಾಕಾದಲ್ಲಿ ಆರಂಭಗೊಂಡ ದಂಗೆ ಕೇವಲ ಎರಡು ದಿನಗಳಲ್ಲಿ ದೇಶಾದ್ಯಂತ ವ್ಯಾಪಿಸಿತು. ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ನಡೆದ ಈ ಹತ್ಯಾಕಾಂಡದಿಂದ ದೇಶದ ರಾಜಕೀಯ ವಲಯದಲ್ಲಿ ಅಶಾಂತಿ ಆವರಿಸಿತ್ತು.
ತನಿಖಾ ಆಯೋಗದ ಅಧ್ಯಕ್ಷ ಎ.ಎಲ್.ಎಂ. ಫಝಲುರ್ರಹಮಾನ್ ಸಲ್ಲಿಸಿದ ವರದಿಯ ಪ್ರಕಾರ, ಅಂದಿನ ಅವಾಮಿ ಲೀಗ್ ಸರ್ಕಾರ ದಂಗೆಯಲ್ಲಿ ನೇರವಾಗಿ ಭಾಗವಹಿಸಿತ್ತು. ಸಂಸತ್ ನ ಮಾಜಿ ಸದಸ್ಯ ಫಝಲ್ ನೂರ್ ತಪೋಶ್ ದಂಗೆಯ “ಪ್ರಧಾನ ಸಂಯೋಜಕ”ನಾಗಿ ಕಾರ್ಯನಿರ್ವಹಿಸಿದ್ದರು ಎಂದು ವರದಿ ಸ್ಪಷ್ಟಪಡಿಸಿದೆ. ಹತ್ಯೆಗಳಿಗೆ ಹಸೀನಾ ಸ್ವತಃ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಆರೋಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತನಿಖೆಯ ವೇಳೆ ವಿದೇಶಿ ಪಡೆಗಳ ಹಸ್ತಕ್ಷೇಪವೂ ಸ್ಪಷ್ಟವಾಗಿ ತೋರುತ್ತದೆ ಎಂದು ರೆಹಮಾನ್ ತಿಳಿಸಿದ್ದಾರೆ.
ವರದಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಹಮಾನ್, 2009ರ ಹತ್ಯಾಕಾಂಡದ ಬಳಿಕ ಭಾರತವು ಬಾಂಗ್ಲಾದೇಶವನ್ನು ಅಸ್ಥಿರಗೊಳಿಸಲು ಮತ್ತು ಸೇನೆಯನ್ನು ದುರ್ಬಲಗೊಳಿಸಲು ಯತ್ನಿಸಿರುವುದಾಗಿ ಆರೋಪಿಸಿದರು. “ಬಾಂಗ್ಲಾದೇಶದ ಸೈನಿಕ ಸಾಮರ್ಥ್ಯ ಕುಂಠಿತಗೊಳಿಸಲು ದೀರ್ಘಕಾಲದಿಂದ ಪಿತೂರಿ ನಡೆಯುತ್ತಿತ್ತು,” ಎಂದು ಅವರು ಹೇಳಿದರು. ಈ ಆರೋಪಗಳ ಕುರಿತು ಭಾರತದಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ 78 ವರ್ಷದ ಹಸೀನಾ ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ವಿದ್ಯಾರ್ಥಿ ಚಳುವಳಿಯಿಂದ ಸರ್ಕಾರ ಪತನಗೊಂಡ ಬಳಿಕ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಉದ್ವಿಗ್ನವಾಗಿದೆ.
ತನಿಖಾ ವರದಿಯನ್ನು ಸ್ವಾಗತಿಸಿದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್, “2009ರ ಹತ್ಯಾಕಾಂಡದ ನಿಜಸ್ವರೂಪವು ವರ್ಷಗಳಿಂದ ಕತ್ತಲೆಯಲ್ಲಿತ್ತು. ಈಗ ಆಯೋಗದ ವರದಿ ಸತ್ಯವನ್ನು ಬೆಳಕಿಗೆ ತಂದಿದೆ,” ಎಂದು ಪ್ರತಿಕ್ರಿಯಿಸಿದರು.
ಹಸೀನಾ ಆಡಳಿತಾವಧಿಯಲ್ಲಿ ನಡೆದಿದ್ದ ಹಿಂದಿನ ತನಿಖೆಯಲ್ಲಿ ವೇತನ ಮತ್ತು ಸೌಲಭ್ಯಗಳ ಬಗ್ಗೆ ಬಾಂಗ್ಲಾದೇಶ ರೈಫಲ್ಸ್ (BDR) ಪಡೆಯ ಅಸಮಾಧಾನವೇ ದಂಗೆಯ ಮೂಲ ಕಾರಣವೆಂದು ಹೇಳಲಾಗಿತ್ತು. ಆದರೆ ಆಗಿನಿಂದಲೂ ವಿರೋಧಿಗಳು ಮಿಲಿಟರಿಯನ್ನು ದುರ್ಬಲಗೊಳಿಸಿ ಅಧಿಕಾರ ಬಲಪಡಿಸಲು ಹಸೀನಾ ಸರ್ಕಾರವೇ ಸಂಚು ರೂಪಿಸಿತ್ತು ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದರು.