ನ್ಯೂಯಾರ್ಕ್ | ಮ್ಯಾನ್ ಹಟನ್ ಗುಂಡಿನ ದಾಳಿಯಲ್ಲಿ ಪೋಲಿಸ್ ಅಧಿಕಾರಿ ದೀದಾರುಲ್ ಇಸ್ಲಾಮ್ ಬಲಿ
Photo source: X
ನ್ಯೂಯಾರ್ಕ್: ನ್ಯೂಯಾಕ್ ನಗರದಲ್ಲಿ ಸುಮಾರು 25 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಗುಂಡಿನ ದಾಳಿಯೊಂದರಲ್ಲಿ ನ್ಯೂಯಾರ್ಕ್ ಪೊಲೀಸ್ ಇಲಾಖೆ(ಎನ್ ವೈ ಪಿ ಡಿ)ಯ ಅಧಿಕಾರಿ ದೀದಾರುಲ್ ಇಸ್ಲಾಮ್(36) ಸೇರಿದಂತೆ ಐವರು ಕೊಲ್ಲಲ್ಪಟ್ಟಿದ್ದಾರೆ. ಬಾಂಗ್ಲಾದೇಶಿ ವಲಸಿಗ ಹಾಗೂ ಇಬ್ಬರು ಮಕ್ಕಳ ತಂದೆಯಾಗಿದ್ದ ಇಸ್ಲಾಮ್ ಅವರನ್ನು ಈಗ ನಗರದ ಅಧಿಕಾರಿಗಳು ಮತ್ತು ಅವರ ಸಮುದಾಯ ‘ಹೀರೋ’ ಎಂದು ನೆನಪಿಸಿಕೊಳ್ಳುತ್ತಿದ್ದಾರೆ. ಹಂತಕ ಸೋಮವಾರ ಸಂಜೆ ಮ್ಯಾನ್ ಹಟನ್ ನ ಕಚೇರಿಯೊಂದಕ್ಕೆ ನುಗ್ಗಿ ಮನಬಂದಂತೆ ಗುಂಡುಗಳನ್ನು ಹಾರಿಸಿದ್ದ.
ಎನ್ ವೈ ಪಿ ಡಿ ಕಮಿಷನರ್ ಜೆಸ್ಸಿಕಾ ಟಿಷ್ ಅವರ ಪ್ರಕಾರ,ನೆವಡಾ ನಿವಾಸಿ ಶೇನ್ ಡೆವನ್ ತಮುರಾ(27) ಎಂದು ಗುರುತಿಸಲಾಗಿರುವ ಶಂಕಿತ ವ್ಯಕ್ತಿ ವ್ಯವಹಾರದ ಸಮಯದ ನಂತರ 345 ಪಾರ್ಕ್ ಅವೆನ್ಯೂ ನ ಲಾಬಿಯನ್ನು ಪ್ರವೇಶಿಸಿ ಎಂ4-ಸ್ಟೈಲ್ ರೈಫಲ್ ನಿಂದ ಗುಂಡುಗಳನ್ನು ಹಾರಿಸತೊಡಗಿದ್ದ. ಮಾನಸಿಕ ಅಸ್ವಸ್ಥತೆಯ ಇತಿಹಾಸವನ್ನು ಹೊಂದಿದ್ದ ತಮುರಾ ಕಟ್ಟಡದ ಹಲವಾರು ಅಂತಸ್ತುಗಳಲ್ಲಿ ದಾಳಿ ನಡೆಸಿ ಇಸ್ಲಾಮ್ ಮತ್ತು ಇತರರನ್ನು ಕೊಂದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತನ್ನ ಮಾನಸಿಕ ಆರೋಗ್ಯ ಕುರಿತು ತಮುರಾ ಆಕ್ರೋಶವನ್ನು ವ್ಯಕ್ತಪಡಿಸಿದ್ದ ಟಿಪ್ಪಣಿಯೊಂದನ್ನು ಪೋಲಿಸರು ಸ್ಥಳದಿಂದ ವಶಪಡಿಸಿಕೊಂಡಿದ್ದು, ಇದು ಆತ ಫುಟ್ ಬಾಲ್ ಆಡುತ್ತಿದ್ದ ಸಮಯದಿಂದಲೂ ತುತ್ತಾಗಿದ್ದ ದೀರ್ಘಕಾಲೀನ ಕಾಯಿಲೆ ಎನ್ ಸೆಫಾಲೋಪತಿಯೊಂದಿಗೆ ಗುಂಡಿನ ದಾಳಿಯ ಸಂಭಾವ್ಯನಂಟನ್ನು ಸೂಚಿಸಿದೆ. ಇತರ ಪ್ರಮುಖ ಸಂಸ್ಥೆಗಳ ಜೊತೆಗೆ ಎನ್ ಎಫ್ ಎಲ್ ನ ಪ್ರಧಾನ ಕಚೇರಿಯನ್ನೂ ಹೊಂದಿರುವ ಕಟ್ಟಡವನ್ನೇ ತಮುರಾ ಏಕೆ ಆಯ್ಕೆ ಮಾಡಿಕೊಂಡಿದ್ದ ಎನ್ನುವುದನ್ನು ಇದು ವಿವರಿಸಬಹುದು ಎಂದು ಅಧಿಕಾರಿಗಳು ಭಾವಿಸಿದ್ದಾರೆ.
ಕರ್ತವ್ಯಕ್ಕೆ ಹೊರತಾದ ಭದ್ರತಾ ಕಾರ್ಯವನ್ನು ನಿರ್ವಹಿಸುತ್ತಿದ್ದ ಇಸ್ಲಾಮ್ ಗುಂಡಿಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ ಅವರು ಮಾರಣಾಂತಿಕ ಗುಂಡೇಟಿಗೆ ಬಲಿಯಾಗುವ ಮುನ್ನ ಹಂತಕನ ಬೆದರಿಕೆಗೆ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದರು. ಅವರು ಗರ್ಭಿಣಿ ಪತ್ನಿ,ಇಬ್ಬರು ಪುತ್ರರು ಮತ್ತು ವೃದ್ಧ ತಂದೆ-ತಾಯಿಯನ್ನು ಅಗಲಿದ್ದಾರೆ. ವರದಿಗಳ ಪ್ರಕಾರ ದುರಂತದ ಸುದ್ದಿ ಕೇಳಿದ ಬಳಿಕ ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.
ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆ್ಯಡಮ್ಸ್ ಮತ್ತು ಎನ್ ವೈ ಪಿ ಡಿ ಸಹೋದ್ಯೋಗಿಗಳು ಇಸ್ಲಾಮ್ ಅವರ ಶೌರ್ಯವನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ. ಶಾಲೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಇಸ್ಲಾಮ್ ಮೂರೂವರೆ ವರ್ಷಗಳ ಹಿಂದೆ ಪೋಲಿಸ್ ಇಲಾಖೆಯನ್ನು ಸೇರಿದ್ದರು.
ಇಸ್ಲಾಮ್ ಕೆಚ್ಚೆದೆಯಿಂದ ಗುಂಡಿನ ದಾಳಿಯನ್ನು ಎದುರಿಸಿದ್ದು ಸ್ಪಷ್ಟವಾಗಿದ್ದು, ಹಂತಕ ಅಮೆರಿಕ ಸಂಜಾತ ಮುಸ್ಲಿಮೇತರನಾಗಿದ್ದರೂ ಬಲಪಂಥೀಯ ವ್ಯಕ್ತಿಗಳು ಘಟನೆಯ ಬೆನ್ನಲ್ಲೇ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದನ್ನು ಸಮುದಾಯದ ನಾಯಕರು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ಬೆಟ್ಟು ಮಾಡಿದ್ದಾರೆ.
ವಲಸಿಗರು ಮತ್ತು ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡಲು ಈ ದುರಂತವನ್ನು ಬಳಸಿಕೊಂಡಿದ್ದಕ್ಕಾಗಿ ನಿರೂಪಕ ವಜಾಹತ್ ಅಲಿ ಅವರು ‘ಝೆಟೆವ್’ನಲ್ಲಿ ಲೂಮರ್ ಮತ್ತು ಚಾರ್ಲಿ ಕಕ್ ಅವರಂತಹ ತೀವ್ರ ಬಲಪಂಥೀಯ ಪ್ರಭಾವಿಗಳನ್ನು ಖಂಡಿಸಿದ್ದಾರೆ.
ಮುಸ್ಲಿಮರನ್ನು ರಾಕ್ಷಸರನ್ನಾಗಿ ನಿರೂಪಿಸುವ ಮತ್ತು ಅವರನ್ನು ನಿರ್ನಾಮ ಮಾಡುವ ಲೂಮರ್ ನಿರಂತರ ದಾಳಿಯನ್ನು ತಡೆಯಲು ಸತ್ಯಾಂಶಗಳಿಗೂ ಸಾಧ್ಯವಿಲ್ಲ ಎಂದು ಬರೆದಿರುವ ಅಲಿ, ಇಸ್ಲಾಮ್ ತನ್ನ ಸುತ್ತಲಿದ್ದವರನ್ನು ರಕ್ಷಿಸುತ್ತ ಸಾವನ್ನಪ್ಪಿದರು. ಅದು ಅವರ ಪರಂಪರೆ, ಲೂಮರ್ ದ್ವೇಷವು ಕೂಡ ಅದನ್ನು ಅಳಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
9/11ರ ನಂತರ ಮಾಧ್ಯಮಗಳಲ್ಲಿ ಅವಮಾನಕ್ಕೊಳಗಾಗಿದ್ದ ಎನ್ ವೈ ಪಿ ಡಿ ಕೆಡೆಟ್ ಮುಹಮ್ಮದ್ ಸಲ್ಮಾನ್ ಹಮ್ದಾನಿ(23) ಅವರನ್ನೂ ಅಲಿ ಉಲ್ಲೇಖಿಸಿದ್ದಾರೆ. ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಜೀವಗಳನ್ನು ಉಳಿಸುವ ಯತ್ನದಲ್ಲಿ ಮೃತಪಟ್ಟ ಹೀರೋ ಎಂದು ನಂತರ ಹಮ್ದಾನಿಯವರನ್ನು ಗುರುತಿಸಲಾಗಿತ್ತು.