×
Ad

ಅಲ್-ಅಖ್ಸಾ ಮಸೀದಿ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಿದ ಇಸ್ರೇಲ್ ಸಚಿವ!

Update: 2025-08-03 22:29 IST

Photo: X

ಜೆರುಸಲೇಂ, ಆ.3: ಇಸ್ರೇಲ್‌ ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ರವಿವಾರ ಜೆರುಸಲೇಂನ ಅಲ್-ಅಖ್ಸಾ ಮಸೀದಿಯ ಆವರಣಕ್ಕೆ ಭೇಟಿ ನೀಡಿದ್ದು ಅಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅತ್ಯಂತ ಸೂಕ್ಷ್ಮ ಸ್ಥಳಕ್ಕೆ ಸಂಬಂಧಿಸಿದ ಕಾನೂನಿಗೆ ಸವಾಲೆಸೆದಿರುವುದಾಗಿ ವರದಿಯಾಗಿದೆ.

ದಶಕಗಳಷ್ಟು ಹಳೆಯದಾದ `ಯಥಾಸ್ಥಿತಿ' ವ್ಯವಸ್ಥೆಯಡಿ, ಅಲ್-ಅಖ್ಸಾ ಆವರಣವನ್ನು ಜೋರ್ಡಾನ್ ನ ಧಾರ್ಮಿಕ ಪ್ರತಿಷ್ಠಾನವು ನಿರ್ವಹಿಸುತ್ತದೆ ಮತ್ತು ಯಹೂದಿಗಳು ಭೇಟಿ ನೀಡಬಹುದು, ಆದರೆ ಅಲ್ಲಿ ಪ್ರಾರ್ಥನೆ ಮಾಡುವಂತಿಲ್ಲ.

ಗುಂಪೊಂದು ಬೆನ್ಗ್ವಿರ್ ನೇತೃತ್ವದಲ್ಲಿ ಅಲ್-ಅಖ್ಸಾದ ಆವರಣವನ್ನು ಪ್ರವೇಶಿಸುವ ಮತ್ತು ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೊವನ್ನು ಯಹೂದಿಗಳ ಸಂಘಟನೆ `ಟೆಂಪಲ್ ಮೌಂಟ್ ಆಡಳಿತ' ಬಿಡುಗಡೆಗೊಳಿಸಿದೆ. ಗಾಝಾದಲ್ಲಿ ಹಮಾಸ್ ಎದುರಿಗಿನ ಯುದ್ಧದಲ್ಲಿ ಇಸ್ರೇಲ್ ಗೆಲ್ಲಬೇಕು ಹಾಗೂ ಗಾಝಾದಲ್ಲಿರುವ ಒತ್ತೆಯಾಳುಗಳು ಸ್ವದೇಶಕ್ಕೆ ಮರಳಬೇಕು ಎಂದು ಪ್ರಾರ್ಥಿಸಿರುವುದಾಗಿ ಬೆನ್ಗ್ವಿರ್ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ` ಅಲ್ ಅಖ್ಸಾ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಇಸ್ರೇಲ್‌ ನ ನೀತಿಯಲ್ಲಿ ಬದಲಾವಣೆಯಾಗಿಲ್ಲ ಮತ್ತು ಆಗುವುದೂ ಇಲ್ಲ' ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News