ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ನ್ಯೂಝಿಲ್ಯಾಂಡ್ ವೇಗಿ ಬೆನ್ ಸಿಯರ್ಸ್
Photo Credit | X/@ESPNcricinfo
ವೆಲ್ಲಿಂಗ್ಟನ್: ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಬೆನ್ ಸಿಯರ್ಸ್ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಬುಧವಾರ ಕರಾಚಿಯಲ್ಲಿ ಕಿವೀಸ್ ಪಡೆಯ ಮೊದಲ ತರಬೇತಿ ಸಮಯದಲ್ಲಿ ಸಿಯರ್ಸ್ ಅವರಿಗೆ ಮಂಡಿರಜ್ಜುವಿನಲ್ಲಿ ನೋವು ಕಾಣಿಕೊಂಡಿದೆ. ಆ ನಂತರ ನಡೆಸಲಾಗಿರುವ ಸ್ಕ್ಯಾನಿಂಗ್‌ನಲ್ಲಿ ಸಣ್ಣ ಬಿರುಕು ಇರುವುದು ಖಚಿತವಾಗಿದ್ದು, ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಕನಿಷ್ಠ ಎರಡು ವಾರಗಳ ಅಗತ್ಯವಿದೆ ಎಂದು ತಿಳಿದುಬಂದಿದೆ.
ದುಬೈನಲ್ಲಿ ನಡೆಯಲಿರುವ ಭಾರತ ವಿರುದ್ಧದ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಸಿಯರ್ಸ್ ಲಭ್ಯ ಇರುವ ಸಾಧ್ಯತೆಯಿದೆ. ಇಂತಹ ಸನ್ನಿವೇಶದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಸಿಯರ್ಸ್ ಬದಲಿಗೆ ವೇಗದ ಬೌಲರ್ ಜೇಕಬ್ ಡಫಿ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಡಫಿ ಅವರು ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ ಆಡಲು ಸದ್ಯ ಪಾಕಿಸ್ತಾನದಲ್ಲಿ ಕಿವೀಸ್ ತಂಡದೊಂದಿಗಿದ್ದಾರೆ.
ಮೊದಲ ಬಾರಿ ಐಸಿಸಿಯ ಪ್ರಮುಖ ಪಂದ್ಯಾವಳಿಯಲ್ಲಿ ಆಡಲು ಸಜ್ಜಾಗಿರುವ ಸಿಯರ್ಸ್ ಅಲಭ್ಯರಾಗಿದ್ದಕ್ಕೆ ನ್ಯೂಝಿಲ್ಯಾಂಡ್‌ನ ಪ್ರಮುಖ ಕೋಚ್ ಗ್ಯಾರಿ ಸ್ಟೆಡ್ ನಿರಾಶೆ ವ್ಯಕ್ತಪಡಿಸಿದ್ದಾರೆ.
ಡಫಿ ಇತ್ತೀಚೆಗೆ ಸ್ವದೇಶದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.
ಕಿವೀಸ್ ಬಳಗವು ಬುಧವಾರ ಆತಿಥೇಯ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡುವ ಮೂಲಕ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
*ನ್ಯೂಝಿಲ್ಯಾಂಡ್ ತಂಡ: ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕಲ್ ಬ್ರೆಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಡ್ಯಾರಿಲ್ ಮಿಚೆಲ್, ವಿಲ್ ಒ’ರೂರ್ಕಿ, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಜೇಕಬ್ ಡಫಿ, ನಥಾನ್ ಸ್ಮಿತ್, ಕೇನ್ ವಿಲಿಯಮ್ಸನ್ ಹಾಗೂ ವಿಲ್ ಯಂಗ್.
*ನ್ಯೂಝಿಲ್ಯಾಂಡ್‌ನ ಗ್ರೂಪ್ ಹಂತದ ಪಂದ್ಯಗಳ ವೇಳಾಪಟ್ಟಿ:
ಫೆ.19: ಪಾಕಿಸ್ತಾನ-ನ್ಯೂಝಿಲ್ಯಾಂಡ್, ಕರಾಚಿ
ಫೆ.24: ಬಾಂಗ್ಲಾದೇಶ-ನ್ಯೂಝಿಲ್ಯಾಂಡ್, ರಾವಲ್ಪಿಂಡಿ
ಮಾ.2: ಭಾರತ-ನ್ಯೂಝಿಲ್ಯಾಂಡ್, ದುಬೈ
..................