ಬಲೂಚಿಸ್ತಾನದ 7 ನಗರಗಳ ಮೇಲೆ ಬಿಎಲ್‍ಎ ದಾಳಿ: ಕ್ವೆಟಾದಲ್ಲಿ ಗಂಭೀರ ಪರಿಸ್ಥಿತಿ
ಜೈಲಿನ ಮೇಲೆ ದಾಳಿ; ಕೈದಿಗಳು ಪರಾರಿ
Photo Credit : AP
ಪೇಷಾವರ: ಪಾಕಿಸ್ತಾನದ ನೈಋತ್ಯ ಪ್ರಾಂತ ಬಲೂಚಿಸ್ತಾನದ 7 ಪ್ರಮುಖ ನಗರಗಳ ಮೇಲೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ಶನಿವಾರ ಸಂಘಟಿತ ದಾಳಿ ನಡೆಸಿದ್ದು ಪ್ರಾಂತೀಯ ರಾಜಧಾನಿ ಕ್ವೆಟಾದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿಸ್ತಾನದಾದ್ಯಂತ ಬಿಎಲ್‍ಎ ಪ್ರತ್ಯೇಕತಾವಾದಿಗಳು ಹತ್ತಕ್ಕೂ ಹೆಚ್ಚು ನಗರಗಳನ್ನು ಪ್ರವೇಶಿಸಿದ್ದಾರೆ. ಕ್ವೆಟಾದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹಲವು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ಬಿಎಲ್‍ಎ ಹೋರಾಟಗಾರರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಸ್ಥಳೀಯ ಮೂಲಗಳು ಹೇಳಿವೆ.
ಕ್ವೆಟಾದ ಸರ್ಯಾಬ್ ರಸ್ತೆಯಲ್ಲಿ ಪೊಲೀಸ್ ವ್ಯಾನ್‍ನ ಮೇಲೆ ದಾಳಿ ನಡೆಸಲಾಗಿದೆ. ಖಾಲಿಕ್ ಶಹೀದ್ ಪೊಲೀಸ್ ಠಾಣೆಯ ಮೇಲೆಯೂ ದಾಳಿ ನಡೆದಿದೆ. ಮಸ್ತುಂಗ್ ಜೈಲಿನ ಮೇಲೆ ದಾಳಿ ನಡೆಸಲಾಗಿದ್ದು 30ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ. ನುಷ್ಕಿ ಗ್ರಾಮದಲ್ಲಿ ಭಯೋತ್ಪಾದನೆ ನಿಗ್ರಹ ಇಲಾಖೆ(ಸಿಟಿಡಿ)ಯ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ 8 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಗ್ವದರ್, ಪಾಸ್ನಿ ನಗರಗಳಲ್ಲೂ ದಾಳಿಯ ವರದಿಯಾಗಿದೆ. ದಲ್ಬಂದಿನ್ ಗ್ರಾಮದಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು ತೀವ್ರ ಗುಂಡಿನ ಚಕಮಕಿ ಮುಂದುವರಿದಿದೆ. ಕಲತ್ ನಗರದಲ್ಲೂ ಘರ್ಷಣೆ ಮುಂದುವರಿದಿದ್ದು ಬಿಎಲ್‍ಎ ಹೋರಾಟಗಾರರು ಪ್ರಮುಖ ರಸ್ತೆಯನ್ನು ನಿಯಂತ್ರಣಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
18 ಭದ್ರತಾ ಸಿಬ್ಬಂದಿ ಸಹಿತ 55 ಮಂದಿ ಸಾವು:
ಪಾಕಿಸ್ತಾನದ ನೈಋತ್ಯದಲ್ಲಿ ಶನಿವಾರ ಬಲೂಚಿಸ್ತಾನ್ ಪ್ರತ್ಯೇಕತಾವಾದಿ ಗುಂಪು ನಡೆಸಿದ ಸಂಘಟಿತ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು 43 ಮಂದಿ ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ 37 ಉಗ್ರರು ಹತರಾಗಿದ್ದಾರೆ ಎಂದು ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಾಂತೀಯ ರಾಜಧಾನಿ ಕ್ವೆಟಾದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 4 ಪೊಲೀಸರು ಸಾವನ್ನಪ್ಪಿದ್ದಾರೆ. ಕ್ವೆಟಾ, ಪಾಸ್ನಿ, ಮಸ್ತುಂಗ್, ನುಷ್ಕಿ ಮತ್ತು ಗ್ವದರ್ ಜಿಲ್ಲೆಗಳಲ್ಲಿ ಹಲವು ಸ್ಥಳಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ಮತ್ತು ಆತ್ಮಹತ್ಯಾ ದಾಳಿ ನಡೆಸಲಾಗಿದೆ. ಕನಿಷ್ಠ 4 ಜಿಲ್ಲೆಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಸಂಪೂರ್ಣ ನಿಯಂತ್ರಣದಲ್ಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಲವು ಸ್ಥಳಗಳಲ್ಲಿ ದಾಳಿ ನಡೆದಿರುವುದನ್ನು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ದೃಢಪಡಿಸಿದ್ದು ದಾಳಿಗಳನ್ನು `ಸಂಘಟಿತ ಆದರೆ ನಿಷ್ಪರಿಣಾಮಕಾರಿ' ಎಂದು ಬಣ್ಣಿಸಿದ್ದಾರೆ.
ಮಿಲಿಟರಿ ಸ್ಥಾಪನೆಗಳು, ಪೊಲೀಸ್ ಮತ್ತು ನಾಗರಿಕ ಆಡಳಿತ ಅಧಿಕಾರಿಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ಮತ್ತು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿರುವುದಾಗಿ ಈ ಪ್ರಾಂತದಲ್ಲಿ ಕಾರ್ಯಾಚರಿಸುತ್ತಿರುವ ಅತ್ಯಂತ ಸಕ್ರಿಯ ಪ್ರತ್ಯೇಕತಾವಾದಿ ಸಶಸ್ತ್ರ ಹೋರಾಟಗಾರರ ಗುಂಪು `ದಿ ಬಲೂಚ್ ಲಿಬರೇಷನ್ ಆರ್ಮಿ(ಬಿಎಲ್‍ಎ) `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.