ಖಾಮಿನೈ ಅಂತ್ಯಕ್ರಿಯೆ | ಟ್ರಂಪ್, ಇಸ್ರೇಲ್ ವಿರುದ್ಧ ಸೇಡಿಗೆ ಆಗ್ರಹಿಸಿದ ಬೃಹತ್ ಜನಸಮೂಹ
Photo Credit : aljazeera.com
ಟೆಹರಾನ್, ಜು.6: ಹತ್ಯೆಗೀಡಾದ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಸಂಸ್ಕಾರದ ಮೆರವಣಿಗೆಯಲ್ಲಿ ಸೋಮವಾರ ಟೆಹರಾನ್‍ನ ಬೀದಿಗಳಲ್ಲಿ ಲಕ್ಷಾಂತರ ಇರಾನಿಯನ್ನರು ಭಾಗವಹಿಸಿದ್ದರು. ಹತ್ಯೆಗೀಡಾದ ಸರ್ವೋಚ್ಚ ನಾಯಕ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರ ಮೃತದೇಹವಿರುವ ಪೆಟ್ಟಿಗೆಗಳನ್ನು ದೊಡ್ಡ ಟ್ರಕ್‍ನಲ್ಲಿ ಪ್ರಮುಖ ರಸ್ತೆಗಳಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಮೆರವಣಿಗೆಯಲ್ಲಿದ್ದ ಜನರನ್ನು ತಂಪಾಗಿಸಲು ಮೇಲಿಂದ ಪೈಪ್‍ಗಳ ಮೂಲಕ ನೀರನ್ನು ಚಿಮುಕಿಸಲಾಗುತ್ತಿತ್ತು.
ವರದಿಗಳ ಪ್ರಕಾರ, ಲಕ್ಷಾಂತರ ಜನರು ಉಪಸ್ಥಿತರಿದ್ದರು ಮತ್ತು ಈ ಮೆರವಣಿಗೆಯು ಸುಮಾರು ನಾಲ್ಕು ದಶಕಗಳ ಹಿಂದೆ ಖಾಮಿನೈ ಅವರ ಪೂರ್ವಾಧಿಕಾರಿಗೆ ನೀಡಲಾದ ವಿದಾಯಕ್ಕೆ ಹೋಲಿಸುವಂತಿತ್ತು.
ಇರಾನ್ ಧ್ವಜಗಳು, ಇರಾನ್ ಬೆಂಬಲಿತ ಲೆಬನಾನ್‍ನ ಹಿಜ್ಬುಲ್ಲಾ ಸಂಘಟನೆಗೆ ಸಂಬಂಧಿಸಿದ ಧ್ವಜಗಳು, ಪ್ರತೀಕಾರವನ್ನು ಸಂಕೇತಿಸುವ ಕೆಂಪು ಧ್ವಜಗಳೂ ಸಹ ಜನಸಮೂಹದಲ್ಲಿ ಗೋಚರಿಸುತ್ತಿದ್ದವು. ಪೂರ್ವ ಟೆಹರಾನ್‍ನ ಇಮಾಮ್ ಹುಸೇನ್ ಚೌಕದಲ್ಲಿ, ಕೆಲವು ಪ್ರತಿಭಟನಾಕಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಕೃತಿಯನ್ನು ನೇತುಹಾಕಿದ್ದು ಟ್ರಂಪ್ ಮತ್ತು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳುವ ಘೋಷಣೆ ಕೂಗಿದರು ಎಂದು ವರದಿಯಾಗಿದೆ. ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್, ಇರಾನ್‍ನ ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸರಕಾರಕ್ಕೆ ಸಾರ್ವಜನಿಕ ಬೆಂಬಲವನ್ನು ತೋರಿಸಲು ಇರಾನ್‍ನ ಪ್ರಭುತ್ವವು ನಗರದಾದ್ಯಂತ ಈ ಸಮಾರಂಭದಲ್ಲಿ ಬೃಹತ್ ಜನಸಮೂಹ ಪಾಲ್ಗೊಳ್ಳುವಂತೆ ಯೋಜಿಸಿತ್ತು. ಸೋಮವಾರದ ಮೆರವಣಿಗೆಯ ನಂತರ ಮಂಗಳವಾರ ಧಾರ್ಮಿಕ ಕೇಂದ್ರವಾದ ಕೋಮ್‍ನಲ್ಲಿ ಮತ್ತು ಬುಧವಾರ ಇರಾಕ್‍ನ ಪವಿತ್ರ ನಗರಗಳಾದ ನಜಾಫ್ ಹಾಗೂ ಕರ್ಬಲಾದಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮವಾಗಿ ಗುರುವಾರ ಈಶಾನ್ಯ ಇರಾನ್‍ನಲ್ಲಿರುವ ಖಾಮಿನೈ ಅವರ ತವರು ನಗರ ಮಶ್ಹಾದ್‍ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
`ಇರಾನ್‍ನ ಶತ್ರುಗಳ ವಿರುದ್ಧ ಪ್ರತಿರೋಧ ಮತ್ತು ಹತ್ಯೆಯಾದ ನಾಯಕನಿಗಾಗಿ ಸೇಡು' ಎಂಬ ಎರಡು ಸ್ಪಷ್ಟ ಸಂದೇಶಗಳನ್ನು ಜನತೆ ರವಾನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.