ಬೊಂಡಿ ಬೀಚ್ ದಾಳಿಯಲ್ಲಿ ಮೃತರ ಸಂಖ್ಯೆ 16ಕ್ಕೆ; ಶಂಕಿತ ದಾಳಿಕೋರರಾದ ತಂದೆ ಮೃತ್ಯು, ಮಗ ಗಂಭೀರ
ದಾಳಿಕೋರರ ವಿರುದ್ಧ ಹೋರಾಡಿ ಅವರಿಂದ ಶಸ್ತ್ರ ಕಸಿದುಕೊಂಡಿದ್ದ ಅಹ್ಮದ್
ದಾಳಿಕೋರರ ವಿರುದ್ಧ ಹೋರಾಡಿ ಶಸ್ತ್ರ ಕಸಿದುಕೊಂಡಿದ್ದ ಅಹ್ಮದ್
photo: indianexpress/X/@juliamacfarlane
ಸಿಡ್ನಿ: ಆಸ್ಟ್ರೇಲಿಯಾದ ಬೊಂಡಿ ಬೀಚ್ನಲ್ಲಿ ಯಹೂದಿ ರಜಾದಿನದ ಕಾರ್ಯಕ್ರಮದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಹತ್ಯಾಕಾಂಡವನ್ನು ಭಯೋತ್ಪಾದನಾ ಕೃತ್ಯ ಎಂದು ಪರಿಗಣಿಸಲಾಗಿದೆ.
ದಾಳಿ ನಡೆಸಿದ ಆರೋಪದಲ್ಲಿ 24 ವರ್ಷದ ನವೀದ್ ಅಕ್ರಮ್ ಎಂಬಾತನನ್ನು ಬಂಧಿಸಲಾಗಿದ್ದು, ಈತನ ದೇಹಸ್ಥಿತಿ ಚಿಂತಾಜನಕವಾಗಿದೆ; ಪೊಲೀಸ್ ಬಿಗಿ ಭದ್ರತೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ ಆತನ ತಂದೆ 50 ವರ್ಷ ವಯಸ್ಸಿನ ಸಾಜಿದ್ ಅಕ್ರಮ್ ಹಣ್ಣಿನ ಅಂಗಡಿ ಮಾಲಕನಾಗಿದ್ದು, ದಾಳಿಯ ವೇಳೆ ಮೃತಪಟ್ಟಿದ್ದಾನೆ ಎಂದು ಸಂಡೇ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಇವರು ವಾರಾಂತ್ಯದಲ್ಲಿ ಜೆರ್ವಿಸ್ ಬೇ ಪ್ರದೇಶಕ್ಕೆ ಮೀನುಗಾರಿಕೆಗೆ ಹೋಗುವುದಾಗಿ ಕುಟುಂಬಕ್ಕೆ ತಿಳಿಸಿ ದಾಳಿ ಪ್ರದೇಶಕ್ಕೆ ತೆರಳಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ಯಾಂಪ್ ಬೆಲ್ ಪರೇಡ್ ಬಳಿಯ ಪಾದಚಾರಿ ಸೇತುವೆಯಿಂದ ಇಬ್ಬರು ಗುಂಡಿನ ದಾಳಿ ನಡೆಸಿದ್ದರು. ಸ್ಥಳೀಯರು, ಪ್ರವಾಸಿಗರು ಹಾಗೂ ಸಾಗರ ಹಬ್ಬದಲ್ಲಿ ಪಾಲ್ಗೊಂಡಿದ್ದವರು ದಾಳಿಗೆ ತುತ್ತಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನ 43 ವರ್ಷದ ಸಿಡ್ನಿ ನಿವಾಸಿ ಅಹ್ಮದ್ ಅಲ್ ಅಹ್ಮದ್ ಎಂಬವರು ತಮ್ಮ ಜೀವವನ್ನು ಪಣಕ್ಕಿಟ್ಟು, ದಾಳಿಕೋರರನ್ನು ನಿಶ್ಶಸ್ತ್ರಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ದಾಳಿಕೋರರು ಹೇಗೆ ಅತ್ಯಧಿಕ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಪಡೆದರು ಎಂಬ ಬಗ್ಗೆ ಮತ್ತು ಅವರ ಜೊತೆಗೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದಾಳಿಕೋರರ ವಾಹನದಲ್ಲಿ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಪತ್ತೆಯಾಗಿವೆ. ಸಿಡ್ನಿ ನಗರದ ಹಲವು ಕಡೆಗಳಲ್ಲಿ ಮತ್ತು ನವೀದ್ ಅಕ್ರಮ್ ನ ಬೊನ್ನಿರ್ಗ್ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.