ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತದಿಂದ ಸಂದೇಶ ಬಂದಿಲ್ಲ: ರಶ್ಯ ಸ್ಪಷ್ಟನೆ
ಸಾಂದರ್ಭಿಕ ಚಿತ್ರ | Photo Credit : freepik
ಮಾಸ್ಕೊ, ಫೆ.3: ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿರುವುದಾಗಿ ಭಾರತವು ತನಗೆ ತಿಳಿಸಿಲ್ಲವೆಂದು ರಶ್ಯನ್ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಭಾರತ-ಅಮೆರಿಕ ನಡುವೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದದ ಭಾಗವಾಗಿ ಭಾರತವು ರಶ್ಯದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಲಿದೆಯೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಕ್ರೆಮ್ಲಿನ್ ಈ ಸ್ಪಷ್ಟನೆ ನೀಡಿದೆ.
‘‘ಈ ವಿಚಾರವಾಗಿ (ರಶ್ಯದಿಂದ ತೈಲ ಖರೀದಿ ಸ್ಥಗಿತ) ಈತನಕ ಹೊಸದಿಲ್ಲಿಯು ಯಾವುದೇ ಹೇಳಿಕೆ ನೀಡಿರುವುದನ್ನು ನಾವು ಕೇಳಿಲ್ಲ’’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾಸ್ಕೊದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘‘ಭಾರತ-ಅಮೆರಿಕ ದ್ವಿಪಕ್ಷೀಯ ಬಾಂಧವ್ಯಗಳನ್ನು ನಾವು ಗೌರವಿಸುತ್ತೇವೆ. ಆದರೆ ರಶ್ಯ ಹಾಗೂ ಭಾರತ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಬೆಳವಣಿಗೆಗೂ ನಾವು ನೀಡುತ್ತಿರುವ ಮಹತ್ವವೇನೂ ಕಡಿಮೆಯಿಲ್ಲ’’ ಎಂದರು.
ಭಾರತ-ರಶ್ಯ ಬಾಂಧವ್ಯವು ನಮಗೆ ಮಹತ್ವದ ವಿಷಯವಾಗಿದೆ. ದಿಲ್ಲಿ ಜೊತೆ ದ್ವಿಪಕ್ಷೀಯ ಬಾಂಧವ್ಯಗಳನ್ನು ಮುಂದಕ್ಕೊಯ್ಯುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದರು.
ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟಿರುವುದಾಗಿ ಸೋಮವಾರ ಟ್ರಂಪ್ ಘೋಷಿಸಿದ್ದರು. ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿದ್ದಕ್ಕಾಗಿ ಭಾರತವು ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.20ಕ್ಕೆ ಇಳಿಸಿರುವುದಾಗಿ ಅವರು ಪ್ರಕಟಿಸಿದ್ದರು.
ರಶ್ಯದಿಂದ ತೈಲ ಖರೀದಿ ನಿಲ್ಲಿಸಲು ಹಾಗೂ ಅಮೆರಿಕ ಮತ್ತು ವೆನೆಝುವೆಲಾದಿಂದ ಅಧಿಕ ತೈಲವನ್ನು ಭಾರತ ಒಪ್ಪಿಕೊಂಡಿದೆ ಎಂದು ಟ್ರಂಪ್ ಅವರು ‘ಎಕ್ಸ್’ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದರು.
ಉಕ್ರೇನ್ ವಿರುದ್ಧ ರಶ್ಯವು ಆಕ್ರಮಣ ನಡೆಸಿದ ಬಳಿಕ ರಶ್ಯದ ತೈಲ ಪೂರೈಕೆಗೆ ಯುರೋಪಿಯನ್ ರಾಷ್ಟ್ರಗಳು ನಿರ್ಬಂಧ ವಿಧಿಸಿದ್ದವು. ಈ ಸನ್ನಿವೇಶದ ಲಾಭವನ್ನು ಪಡೆದ ಭಾರತವು ಕಡಿಮೆ ದರದಲ್ಲಿ ರಶ್ಯನ್ ತೈಲವನ್ನು ಖರೀದಿಸತೊಡಗಿತ್ತು.