×
Ad

ಎಪ್ಸ್ಟೀನ್ ಕಡತದಲ್ಲಿ ಒಳ ಉಡುಪಿನಲ್ಲಿರುವ ಪೋಟೊ ಬಹಿರಂಗದ ಬೆನ್ನಲ್ಲೆ ಲೇಬರ್ ಪಕ್ಷಕ್ಕೆ ಪೀಟರ್ ಮ್ಯಾಂಡೆಲ್ಸನ್ ರಾಜೀನಾಮೆ

ಮ್ಯಾಂಡೆಲ್ಸನ್ ವಿರುದ್ಧ ತನಿಖೆಗೆ ಆದೇಶಿಸಿದ ಯುಕೆ ಪ್ರಧಾನಿ

Update: 2026-02-03 12:11 IST

ಪೀಟರ್ ಮ್ಯಾಂಡೆಲ್ಸನ್ (Photo credit: harvard.edu)

ವಾಷಿಂಗ್ಟನ್: ಹೊಸದಾಗಿ ಬಿಡುಗಡೆಯಾದ ಎಪ್ಸ್ಟೀನ್ ಕಡತದಲ್ಲಿ ಒಳ ಉಡುಪಿನಲ್ಲಿರುವ ಪೋಟೊ ಬಹಿರಂಗವಾದ ಬೆನ್ನಲ್ಲೆ ಮಾಜಿ ಬ್ರಿಟಿಷ್ ರಾಯಭಾರಿ ಪೀಟರ್ ಮ್ಯಾಂಡೆಲ್ಸನ್ ಅವರು ಲೇಬರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಅಮೆರಿಕದ ನ್ಯಾಯಾಂಗ ಇಲಾಖೆಯು ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪೀಟರ್ ಮ್ಯಾಂಡೆಲ್ಸನ್ ಮಹಿಳೆಯೋರ್ವರ ಪಕ್ಕದಲ್ಲಿ ಒಳ ಉಡುಪು ಮತ್ತು ಟೀ ಶರ್ಟ್ ಮಾತ್ರ ಧರಿಸಿ ನಿಂತಿರುವುದು ಕಂಡು ಬಂದಿದೆ.

ಮಾಜಿ ಕ್ಯಾಬಿನೆಟ್ ಸಚಿವರೂ ಆಗಿರುವ ಪೀಟರ್ ಮ್ಯಾಂಡೆಲ್ಸನ್ ರವಿವಾರ ಲೇಬರ್ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು. ಮತ್ತಷ್ಟು ಮುಜುಗರ ಉಂಟುಮಾಡುವುದನ್ನು ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಜೆಫ್ರಿ ಎಪ್ಸ್ಟೀನ್‌ನೊಂದಿಗೆ ಹೊಂದಿದ್ದ ಸಂಬಂಧಗಳ ಕಾರಣದಿಂದಾಗಿ ಕಳೆದ ವರ್ಷ ಅಮೆರಿಕಗೆ ಬ್ರಿಟನ್ ರಾಯಭಾರಿಯ ಸ್ಥಾನದಿಂದ ವಜಾಗೊಂಡಿದ್ದ ಮಂಡೆಲ್ಸನ್, ಹೊಸ ದಾಖಲೆಯಲ್ಲಿ ಹೆಸರು ಕಾಣಿಸಿಕೊಂಡ ಬಳಿಕ ಮತ್ತಷ್ಟು ಒತ್ತಡಕ್ಕೆ ಒಳಗಾಗಿದ್ದರು.

ಲೇಬರ್ ಪಕ್ಷಕ್ಕೆ ರಾಜೀನಾಮೆ ನೀಡಿವ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಮಂಡೆಲ್ಸನ್ ತಿಳಿಸಿದ್ದಾರೆ.

"ಜೆಫ್ರಿ ಎಪ್ಸ್ಟೀನ್ ಅವರನ್ನು ಸುತ್ತುವರೆದಿರುವ ವಿವಾದದಲ್ಲಿ ಮತ್ತೆ ನನ್ನನ್ನು ಎಳೆದು ತರಲಾಗಿದೆ. ಇದರ ಬಗ್ಗೆ ನನಗೆ ವಿಷಾದವಿದೆ. 20 ವರ್ಷಗಳ ಹಿಂದೆ ಅವರು ನನಗೆ ಹಣಕಾಸು ಪಾವತಿಗಳನ್ನು ಮಾಡಿದ್ದಾರೆ ಎಂಬ ಸುಳ್ಳು ಆರೋಪಗಳ ತನಿಖೆ ಮಾಡಬೇಕಾಗಿದೆ ಮತ್ತು ಅವುಗಳ ಬಗ್ಗೆ ನನ್ನಲ್ಲಿ ಯಾವುದೇ ದಾಖಲೆ ಅಥವಾ ನೆನಪಿಲ್ಲ. ಲೇಬರ್ ಪಕ್ಷಕ್ಕೆ ಮತ್ತಷ್ಟು ಮುಜುಗರ ಉಂಟುಮಾಡಲು ನಾನು ಬಯಸುವುದಿಲ್ಲ ಆದ್ದರಿಂದ ನಾನು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಮಂಡೆಲ್ಸನ್ ರಾಜೀನಾಮೆ ಪತ್ರದಲ್ಲಿ ಹೇಳಿರುವ ಬಗ್ಗೆ ದಿ ಗಾರ್ಡಿಯನ್ ವರದಿ ಮಾಡಿದೆ.

ತನಿಖೆಗೆ ಆದೇಶಿಸಿದ ಯುಕೆ ಪ್ರಧಾನಿ

ಪೀಟರ್ ಮಂಡೆಲ್ಸನ್ ಹಾಗೂ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನಡುವೆ ಇದ್ದ ಸಂಬಂಧಗಳ ಕುರಿತು ತುರ್ತು ತನಿಖೆಗೆ ಯುಕೆ ಪ್ರಧಾನಿ ಕಿಯರ್ ಸ್ಟಾರ್ಮರ್ ಆದೇಶ ನೀಡಿದ್ದಾರೆ ಎಂದು Downing Street ಸೋಮವಾರ ತಿಳಿಸಿದೆ. ಮಂಡೆಲ್ಸನ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಈ ಸಂಬಂಧಗಳು ಇತ್ತಾ ಎಂಬ ಬಗ್ಗೆಯೂ ತನಿಖೆ ಮಾಡಲಾಗುತ್ತದೆ.

ಮಂಡೆಲ್ಸನ್ ಅವರ ಲಾರ್ಡ್ ಪದವಿಯನ್ನು ಕಸಿದುಕೊಳ್ಳಬೇಕು ಹಾಗೂ ಸಂಸತ್ತಿನ ಮೇಲ್ಮನೆಯಾದ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಅವರು ಇನ್ನು ಮುಂದೆ ಸದಸ್ಯರಾಗಿರಬಾರದು ಎಂಬ ಅಭಿಪ್ರಾಯವನ್ನೂ ಸ್ಟಾರ್ಮರ್ ಹೊಂದಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News