"ಬ್ರಾಹ್ಮಣರಿಗೆ ಲಾಭವಾಗುತ್ತಿದೆ": ರಷ್ಯಾದ ತೈಲ ವ್ಯವಹಾರದಲ್ಲಿ ಭಾರತದ ವಿರುದ್ಧ ಡೊನಾಲ್ಡ್ ಟ್ರಂಪ್ ಸಲಹೆಗಾರನ ಟೀಕೆ
ಉದ್ದೇಶಪೂರ್ವಕವಾಗಿಯೇ ಬ್ರಾಹ್ಮಣ ಪದವನ್ನು ಬಳಸಲಾಗಿದೆ ಎಂದ ವಿಪಕ್ಷ
ಪೀಟರ್ ನವಾರೋ (Photo credit: AP)
ವಾಷಿಂಗ್ಟನ್: ಮೋದಿ ಓರ್ವ ಶಕ್ತಿಶಾಲಿ ನಾಯಕ, ಆದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವು ಪುಟಿನ್ ಹಾಗೂ ಕ್ಸಿ ಜಿನ್‌ಪಿಂಗ್‌ರೊಂದಿಗೆ ಹತ್ತಿರವಾಗಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ. ಭಾರತೀಯರ ಆಯವ್ಯಯದಲ್ಲಿ ಬ್ರಾಹ್ಮಣರು ಲಾಭ ಗಳಿಸುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು, ಮತ್ತು ನಾವು ಈ ಬೆಳವಣಿಗೆಗಳ ಮೇಲೆ ನಿಗಾ ಇಡುತ್ತಿದ್ದೇವೆ,” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವಾರೋ ಅವರು ಭಾರತವನ್ನು ಗುರಿಯಾಗಿಸಿಕೊಂಡು ತೀವ್ರ ಟೀಕೆ ಮಾಡಿದ್ದಾರೆ.
ʼಫಾಕ್ಸ್ ನ್ಯೂಸ್ʼಗೆ ನೀಡಿದ ಸಂದರ್ಶನದಲ್ಲಿ ನವಾರೋ, ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಮೂಲಕ ಭಾರತವು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕವು ಭಾರತ ಆಮದುಗಳ ಮೇಲೆ ವಿಧಿಸಿರುವ 50% ರಷ್ಟು ಸುಂಕವನ್ನ ಸಮರ್ಥಿಸಿರುವ ನವಾರೋ, “ಪುಟಿನ್ ಉಕ್ರೇನ್ ಮೇಲೆ ದಾಳಿ ಮಾಡುವ ಮೊದಲು ಭಾರತವು ರಷ್ಯಾದ ತೈಲವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿತ್ತು. ಆದರೆ ಈಗ ರಷ್ಯಾದ ಸಂಸ್ಕರಣಾಗಾರರು ತೈಲವನ್ನು ರಿಯಾಯಿತಿಯಲ್ಲಿ ಮಾರುತ್ತಿದ್ದಾರೆ. ಭಾರತ ಅದನ್ನು ಸಂಸ್ಕರಿಸಿ ಯುರೋಪ್, ಆಫ್ರಿಕಾ ಮತ್ತು ಏಷ್ಯಾಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಇದು ನೇರವಾಗಿ ರಷ್ಯಾದ ಯುದ್ಧಕ್ಕೆ ಸಹಾಯ ಮಾಡುತ್ತಿದೆ,” ಎಂದು ಹೇಳಿದರು.
ಭಾರತದ ವ್ಯಾಪಾರ ನೀತಿಗಳನ್ನೂ ಟೀಕಿಸಿದ ಅವರು, “ಭಾರತವೇ ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶ. ಅವರು ನಮ್ಮ ಸರಕುಗಳಿಗೆ ಭಾರತದಲ್ಲಿ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ, ಆದರೆ ರಷ್ಯಾದ ತೈಲದಿಂದ ಭಾರೀ ಲಾಭ ಗಳಿಸುತ್ತಿದ್ದಾರೆ. ಇದರ ಹೊರೆ ಅಮೆರಿಕದ ಕಾರ್ಮಿಕರು, ತೆರಿಗೆದಾರರು ಹಾಗೂ ಉಕ್ರೇನ್ ನಲ್ಲಿ ಯುದ್ಧದಿಂದ ಸಾಯುತ್ತಿರುವವರ ಮೇಲೆ ಬೀಳುತ್ತಿದೆ,” ಎಂದು ಹೇಳಿದ್ದಾರೆ.
ನವಾರೋ ಹಲವು ಬಾರಿ ರಷ್ಯಾ-ಉಕ್ರೇನ್ ಯುದ್ಧವನ್ನು “ಮೋದಿಯ ಯುದ್ಧ” ಎಂದು ಕರೆದಿದ್ದು, ರಷ್ಯಾದೊಂದಿಗಿನ ವ್ಯಾಪಾರವನ್ನು ನಿಲ್ಲಿಸಲು ಭಾರತ ನಿರಾಕರಿಸುತ್ತಿರುವುದರಿಂದ ಉಕ್ರೇನ್‌ನಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
“ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುವ ಮೊದಲು ಭಾರತದ ತೈಲ ಆಮದುಗಳಲ್ಲಿ ರಷ್ಯಾದ ಪಾಲು 1% ಕ್ಕಿಂತ ಕಡಿಮೆ ಇತ್ತು. ಇಂದು ಅದು 30% ದಾಟಿದೆ. ದಿನಕ್ಕೆ 1.5 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚಾಗಿದೆ. ಈ ಏರಿಕೆಯು ಭಾರತದ ಸ್ವಂತ ಬೇಡಿಕೆಯಿಂದ ಅಲ್ಲ, ಭಾರತೀಯ ತೈಲ ಲಾಬಿಗಳ ಲಾಭಕೋರ ನೀತಿಗಳ ಪರಿಣಾಮ,” ಎಂದು ನವಾರೋ ಟೀಕಿಸಿದರು.
“ಭಾರತವು ಅಮೆರಿಕದ ಡಾಲರ್‌ಗಳನ್ನು ಬಳಸಿಕೊಂಡು ರಿಯಾಯಿತಿಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತದೆ. ನಂತರ ಅದನ್ನು ಸಂಸ್ಕರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತದೆ. ಇದರಿಂದ ರಷ್ಯಾ ತನ್ನ ಯುದ್ಧಕ್ಕೆ ಹಣಕಾಸು ಒದಗಿಸಲು ನೆರವಾಗುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.
“ಇದು ಭಾರತದ ಅನ್ಯಾಯದ ವ್ಯಾಪಾರದ ವಿಷಯವಷ್ಟೇ ಅಲ್ಲ. ಇದು ಪುಟಿನ್ ಅವರ ಯುದ್ಧ ಯಂತ್ರಕ್ಕೆ ಭಾರತ ನೀಡುತ್ತಿರುವ ಆರ್ಥಿಕ ಸಹಾಯವನ್ನು ಕಡಿತಗೊಳಿಸುವ ನಡೆ,” ಎಂದು ನವಾರೋ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವಾರೋ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರಿಂದ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ, ನವಾರೋ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ಭಾರತದಲ್ಲಿ ನಿರ್ದಿಷ್ಟ ಜಾತಿಯನ್ನು ಗುರಿ ಮಾಡುವುದು ನಾಚಿಕೆಗೇಡು. ಅಮೆರಿಕದ ಪರಿಭಾಷೆಯಲ್ಲಿ ಅದನ್ನು ಬೋಸ್ಟನ್ ಬ್ರಾಹ್ಮಿನ್ ಎಂಬುದಕ್ಕೆ ಬಳಸಿರುವುದು ಎಂದು ನನಗೆ ತಿಳಿದಿದೆ. ಆದರೆ ಭಾರತದ ಪರಿಭಾಷೆಯಲ್ಲಿ ಅದು ಆಕಸ್ಮಿಕವಾಗಿ ಬರಲು ಸಾಧ್ಯವಿಲ್ಲ. ಬ್ರಾಹ್ಮಣ ಪದವನ್ನು ಅಮೆರಿಕದ ಆಡಳಿತದಲ್ಲಿರುವ ಹಿರಿಯ ವ್ಯಕ್ತಿಯೊಬ್ಬರು ಬಳಸಿರುವುದು ಉದ್ದೇಶಪೂರ್ವಕವಾಗಿಯೇ ಇದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿ ಎಂದು ಅವರು ಹೇಳಿದ್ದಾರೆ.
ಆದರೆ ಪೀಟರ್ ನವಾರೋ ಬಳಸಿದ 'ಬ್ರಾಹ್ಮಿನ್ಸ್' ಪದ ಭಾರತದ ಬ್ರಾಹ್ಮಣರ ಬಗ್ಗೆಯೇ ಹೇಳಿದ್ದಾ ಅಥವಾ ಸಾಮಾಜಿಕವಾಗಿ ಹಾಗು ಆರ್ಥಿಕವಾಗಿ ಬಹಳ ಮೇಲ್ ಸ್ತರದಲ್ಲಿರುವ ಎಲ್ಲರನ್ನೂ ಉದ್ದೇಶಿಸಿ ಬಳಸಿದ ಪದವೇ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅಮೇರಿಕದಲ್ಲಿ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಅತ್ಯಂತ ಪ್ರಭಾವಿಗಳನ್ನು 'ಬೋಸ್ಟನ್ ಬ್ರಾಹ್ಮಿನ್ಸ್' ಎಂದು ಕರೆಯುವ ಪರಿಪಾಠವಿದೆ ಎಂದು ಸಂಸದರಾದ ಸಾಗರಿಕಾ ಘೋಷ್ ಹಾಗು ಸಾಕೇತ್ ಗೋಖಲೆ ಹೇಳಿದ್ದಾರೆ.
ನವಾರೋ ಅವರ ಹೇಳಿಕೆಯನ್ನು ವಿಶ್ಲೇಷಿಸಿದ್ದಾರೆ. "ಬೋಸ್ಟನ್ ಬ್ರಾಹ್ಮಣ" ಎಂಬ ಪದ ಅಮೆರಿಕದ ನ್ಯೂ ಇಂಗ್ಲೆಂಡ್ ನ ಶ್ರೀಮಂತ ಗಣ್ಯರನ್ನು ಉಲ್ಲೇಖಿಸಲು ಬಳಸಲಾಗುತ್ತಿತ್ತು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಸಾಗರಿಕಾ ಘೋಷ್ ತಿಳಿಸಿದ್ದಾರೆ. ಬ್ರಾಹ್ಮಣ ಎಂಬ ಪದವನ್ನು ಇಂಗ್ಲಿಷ್ ಮಾತನಾಡುವ ಜಗತ್ತಿನಲ್ಲಿ ಇನ್ನೂ ಶ್ರೀಮಂತರು ಅಥವಾ ಸಾಮಾಜಿಕ ಗಣ್ಯರಿಗೆ ಬಳಸಲಾಗುತ್ತದೆ. ಇದನ್ನು ತಿಳಿಯದೆ ಅನವಶ್ಯಕ ವಿವಾದ ಸೃಷ್ಟಿಸುವುದು ಆಶ್ಚರ್ಯಕರ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
"ಪೀಟರ್ ನವಾರೋ ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್ ನವರು. ನ್ಯೂ ಇಂಗ್ಲೆಂಡ್ ಪ್ರದೇಶದಲ್ಲಿ 'ಬ್ರಾಹ್ಮಣ' ಎಂಬ ಪದವನ್ನು ಶ್ರೀಮಂತ ಗಣ್ಯರಿಗೆ ಬಳಸಲಾಗುತ್ತದೆ" ಎಂದು ಟಿಎಂಸಿ ನಾಯಕ ಸಾಕೇತ್ ಗೋಖಲೆ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.