×
Ad

ಕೆನಡಾದಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನ ಸ್ಥಗಿತ

Update: 2025-10-03 11:07 IST

Photo | indiatoday.

ಟೊರೊಂಟೊ: ಕೆನಡಾದ ಒಂಟಾರಿಯೊ ಪ್ರಾಂತ್ಯದ ಓಕ್‌ವಿಲ್ಲೆಯ ಚಿತ್ರಮಂದಿರದಲ್ಲಿ ಸತತ ಹಿಂಸಾತ್ಮಕ ದಾಳಿಗಳ ಹಿನ್ನೆಲೆಯಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಳೆದ ಒಂದು ವಾರದಿಂದ ಚಿತ್ರಮಂದಿರದ ಮೇಲೆ ನಡೆದ ಗುಂಡಿನ ದಾಳಿ ಬಳಿಕ ಆತಂಕ ಸೃಷ್ಟಿಯಾಗಿತ್ತು. ಸೆಪ್ಟೆಂಬರ್ 25ರಂದು ರಾತ್ರಿ ಇಬ್ಬರು ಶಂಕಿತರು ಗ್ಯಾಸ್ ಕ್ಯಾನ್ ಬಳಸಿ ಚಿತ್ರಮಂದಿರದ ಪ್ರವೇಶದ್ವಾರಕ್ಕೆ ಬೆಂಕಿ ಹಚ್ಚಿದ್ದರು. ಬೆಂಕಿಯನ್ನು ನಿಯಂತ್ರಿಸಲಾಯಿತು. ಕಟ್ಟಡಕ್ಕೆ ಹಾನಿಯಾದರೂ, ಒಳಗೆ ಬೆಂಕಿ ಹರಡಿರಲಿಲ್ಲ. ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ.

SUV ಕಾರೊಂದು ಪಾರ್ಕಿಂಗ್ ಪ್ರದೇಶದಲ್ಲಿ ಹಲವು ಬಾರಿ ಸುತ್ತು ಹಾಕಿದ ನಂತರ ಶಂಕಿತರು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ.

ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಮಂದಿರ ನಿರ್ವಹಣಾ ಮಂಡಳಿ, “ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ಸಂಬಂಧಿಸಿದ ಬೆದರಿಕೆಗಳು ಮತ್ತು ವಿಧ್ವಂಸಕ ಕೃತ್ಯಗಳನ್ನು ನಾವು ಹಿಂದೆಯೂ ಎದುರಿಸಿದ್ದೇವೆ. ಇಂತಹ ಘಟನೆಗಳು ಆತಂಕಕಾರಿ. ನಮ್ಮ ಸಮುದಾಯಕ್ಕೆ ಸುರಕ್ಷಿತ ವಾತಾವರಣ ಒದಗಿಸುವ ಬದ್ಧತೆಯಿಂದ ನಾವು ಹಿಂದೆ ಸರಿಯುವುದಿಲ್ಲ” ಎಂದು ತಿಳಿಸಿದೆ.

ಹಾಲ್ಟನ್ ಪ್ರಾದೇಶಿಕ ಪೊಲೀಸ್ ವಿಭಾಗವು ಇಬ್ಬರು ಶಂಕಿತರ ವಿವರಗಳನ್ನು ಪ್ರಕಟಿಸಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News