ಚೀನಾ: ತೀವ್ರ ಹಿಮಪಾತ
Update: 2023-11-06 20:52 IST
Photo: NDTV
ಬೀಜಿಂಗ್: ಅಕಾಲಿಕವಾದ ಚಳಿ ಹವಾಮಾನ ಹಾಗೂ ಹಿಮಪಾತದಿಂದಾಗಿ ಈಶಾನ್ಯ ಚೀನಾದ ಹೈಲಾಂಗ್‍ಜಿಯಾಂಗ್ ಪ್ರಾಂತದಲ್ಲಿ ಸೋಮವಾರ ಮಂಜು ಮುಸುಕಿದ ವಾತಾವರಣ ಕಂಡುಬಂದಿದ್ದು 49 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಸರಕಾರ ಹೇಳಿದೆ.
ಪ್ರಾಂತದ ರಾಜಧಾನಿ ಹರ್ಬಿನ್ ನಗರದ ಹಲವೆಡೆ ಶಿಶುವಿಹಾರ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು, ತರಬೇತಿ ಸಂಸ್ಥೆಗಳನ್ನು ಮುಚ್ಚಲಾಗಿದೆ. ಲಿಯಾನಿಂಗ್ ಮತ್ತು ಜಿಲಿನ್ ಪ್ರಾಂತಗಳಲ್ಲೂ ಶಾಲೆಗಳನ್ನು ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು ದೇಶದ ಇತರ ಪ್ರದೇಶಗಳಿಗೂ ಸಮಸ್ಯೆ ವ್ಯಾಪಿಸಬಹುದು. ಇನ್ನರ್ ಮಂಗೋಲಿಯಾ, ಹೆಬೈ, ಜಿಲಿನ್ ಮತ್ತು ಲಿಯಾನಿಂಗ್ ಪ್ರಾಂತಗಳಲ್ಲೂ ಭಾರೀ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.