Photo Credit : indiatoday.in

ನ್ಯೂಯಾರ್ಕ್: ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳನ್ನು ತಪ್ಪಿಸಿ ಅತ್ಯಾಧುನಿಕ ಸೆಮಿಕಂಡಕ್ಟರ್ ಚಿಪ್ ಗಳನ್ನು ಪಡೆಯಲು ಹಾಗೂ ಜಾಗತಿಕ ಚಿಪ್ ಉದ್ಯಮದ ಕುರಿತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಚೀನಾ ಕನಿಷ್ಠ ಎರಡು ವರ್ಷಗಳ ಕಾಲ ಗೂಢಚಾರಿಕೆ ನಡೆಸಿತ್ತು ಎಂದು The New York Times ವರದಿ ಮಾಡಿದೆ.

ಈ ಕಾರ್ಯಾಚರಣೆಗೆ ವೇಗ ನೀಡಲು ಚೀನಾದ ಮಿನಿಸ್ಟ್ರಿ ಆಫ್ ಸ್ಟೇಟ್ ಸೆಕ್ಯೂರಿಟಿ (MSS) ಮುಖ್ಯಸ್ಥ ಚೆನ್ ಯಿಕ್ಸಿನ್ ನೇತೃತ್ವದಲ್ಲಿ ಕಾರ್ಯಕಾರಿ ಗುಂಪೊಂದನ್ನು ರಚಿಸಲಾಗಿತ್ತು. ಚೀನಾ ಕಂಪೆನಿಗಳು ಅತ್ಯಾಧುನಿಕ ಚಿಪ್ ಗಳನ್ನು ಖರೀದಿಸಿ ಚೀನಾಗೆ ಕಳ್ಳಸಾಗಣೆ ಮಾಡಲು ನೆರವು ನೀಡುವುದು ಈ ಗುಂಪಿನ ಪ್ರಮುಖ ಉದ್ದೇಶವಾಗಿತ್ತು. ಜತೆಗೆ, ಸೆಮಿಕಂಡಕ್ಟರ್ ಉದ್ಯಮ ಹಾಗೂ ಅದರ ಪೂರೈಕೆ ಸರಪಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಗುರಿಯೂ ಹೊಂದಿತ್ತು. ಏಷ್ಯಾ, ಅಮೆರಿಕ ಮತ್ತು ಯುರೋಪ್ ನ ಸೇವಾನಿರತ ಹಾಗೂ ಮಾಜಿ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ.

Nvidia ಸಹ ಸಂಸ್ಥಾಪಕ ಹಾಗೂ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆನ್ಸನ್ ಹುವಾಂಗ್ ಅವರ ಮೇಲೆ ಗೂಢಚಾರಿಕೆ ನಡೆಸಲು ಚೀನಾ ಗುಪ್ತಚರ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಚೀನಾ ಉದ್ಯಮಿ ಅಲೀಸ್ ಹುವಾಂಗ್ ಎಂಬ ಮಹಿಳೆಯನ್ನು ಬಳಸಿಕೊಳ್ಳಲಾಗಿತ್ತು ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಆರೋಪಗಳ ಕುರಿತು ಅಮೆರಿಕ ಪರಿಶೀಲನೆ ನಡೆಸುತ್ತಿದೆ. ಆದರೆ, ಈ ಆರೋಪಗಳು ಇನ್ನೂ ಸಾಬೀತಾಗಿಲ್ಲ.

ಅಲೀಸ್ ಹುವಾಂಗ್ ಅವರ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಕಂಪೆನಿಗಳು ಹಾಗೂ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಸರ್ಕಾರಿ ಸ್ವಾಮ್ಯದ ರಕ್ಷಣಾ ಗುತ್ತಿಗೆದಾರರ ನಡುವೆ ನೇರ ಸಂಬಂಧ ಇಲ್ಲದಿದ್ದರೂ, ಈ ಕಂಪೆನಿಗಳ ಮೂಲಕ ಸೇನೆಯೊಂದಿಗೆ ಪರೋಕ್ಷ ಸಂಪರ್ಕಗಳಿವೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ನ. 20ರಂದು ಪ್ರಕಟವಾಗಿದ್ದ ವರದಿಗೆ ಪೂರಕವಾಗಿ ಈ ತನಿಖಾ ವರದಿ ಪ್ರಕಟಿಸಲಾಗಿದೆ. ಸ್ವತಂತ್ರ ಗುಪ್ತಚರ ಸಂಸ್ಥೆ ಸ್ಟ್ರೈಡರ್ ಟೆಕ್ನಾಲಜೀಸ್ ನ ಗೌಪ್ಯ ವಿಶ್ಲೇಷಣೆ ಹಾಗೂ ಕಾರ್ಪೊರೇಟ್ ದಾಖಲೆಗಳ ಪರಿಶೀಲನೆಯ ಆಧಾರದಲ್ಲಿ, ಹುವಾಂಗ್ ಕುಟುಂಬ ಅಥವಾ ಅವರ ಸಹ ಉದ್ಯಮಿಗಳ ಕಂಪೆನಿಗಳಿಗೆ ಚೀನಾ ಸರ್ಕಾರ ಸುಮಾರು 3.6 ಶತಕೋಟಿ ಅಮೆರಿಕನ್ ಡಾಲರ್ ಬಂಡವಾಳ ಹರಿಸಿದೆ ಎಂದು ಹಿಂದಿನ ವರದಿ ಹೇಳಿತ್ತು.

Nvidia ಚಿಪ್ ಗಳನ್ನು ಪಡೆಯುತ್ತಿದ್ದ ಡೇಟಾ ಸೆಂಟರ್ ಗಳು ಸೇರಿದಂತೆ ವಿವಿಧ ತಂತ್ರಜ್ಞಾನ ಯೋಜನೆಗಳಿಗೆ ಈ ಬಂಡವಾಳ ಒದಗಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ, ಚೀನಾ ಸೇನೆಯು ಈ ಡೇಟಾ ಸೆಂಟರ್ ಗಳ ಗಣಕೀಕರಣ ಸಾಮರ್ಥ್ಯವನ್ನು ನಿಜವಾಗಿಯೂ ಬಳಸಿಕೊಂಡಿತೇ ಎಂಬುದು ಲಭ್ಯವಿರುವ ವಿಶ್ಲೇಷಣೆಗಳಿಂದ ಸಾಬೀತಾಗಿಲ್ಲ ಎಂದು ವರದಿ ತಿಳಿಸಿದೆ.

ಚೀನಾ ಈ ಗೂಢಚಾರಿಕೆ ಆರೋಪಗಳನ್ನು ನಿರಾಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸದಾನಂದ ಗಂಗನಬೀಡು , ವಾರ್ತಾಭಾರತಿ

contributor