ಇರಾನ್ ನೊಂದಿಗೆ ಶಾಶ್ವತ ಒಪ್ಪಂದಕ್ಕೆ ಆದ್ಯತೆ: ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ಟೆಹರಾನ್, ನ.22: ಇರಾನ್ ನಲ್ಲಿ ಆಡಳಿತ ಬದಲಾವಣೆಯ ಬಗ್ಗೆ ತಮಗೆ ವಿಶೇಷ ಆಸಕ್ತಿಯಿಲ್ಲ. ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯಲು ಟೆಹ್ರಾನ್ ನೊಂದಿಗೆ ಶಾಶ್ವತ ಒಪ್ಪಂದ ಮಾಡಿಕೊಳ್ಳುವುದೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ನ ರಾಜಕೀಯ ನಾಯಕತ್ವವನ್ನು ಬದಲಾಯಿಸುವ ಬಗ್ಗೆ ತಾವು ಎಂದಿಗೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಪ್ರಸ್ತುತ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಇರಾನ್ ನ ಮೊದಲ ಮತ್ತು ಎರಡನೇ ನಾಯಕರ ಗುಂಪುಗಳನ್ನು ನಿರ್ಮೂಲನೆ ಮಾಡಲಾಗಿದೆ. ಈಗ ಮೂರನೇ ಗುಂಪಿನೊಂದಿಗೆ ವ್ಯವಹರಿಸುತ್ತಿದ್ದೇವೆ ಎಂದು ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.
ಇರಾನ್ ನ ಪ್ರಸ್ತುತ ನಾಯಕತ್ವದ ಸದಸ್ಯರ ಮನೋಭಾವವು ತುಂಬಾ ಭಿನ್ನವಾಗಿದೆ. ಬಹುಶಃ ಈ ಜನರು ಹೆಚ್ಚು ವಿವೇಚನಾಶೀಲರಾಗಿದ್ದಾರೆ. ಆದರೆ ಅವರು ತುಂಬಾ ಕಠಿಣರು. ನಾವು ಒಂದು ಒಪ್ಪಂದ ಮಾಡಿಕೊಳ್ಳುತ್ತೇವೆ; ಮರುದಿನವೇ ಅವರು ಆ ಒಪ್ಪಂದವನ್ನು ಮುರಿಯುತ್ತಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವ ಮತ್ತು ಸಂಘರ್ಷಕ್ಕೆ ಅಂತ್ಯ ಹಾಡುವಂತಹ ಶಾಶ್ವತ ಒಪ್ಪಂದವನ್ನು ವಾಷಿಂಗ್ಟನ್ ಬಯಸುತ್ತಿದೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ.