Photo: x.com/IndiaToday

ಹೊಸದಿಲ್ಲಿ: ಸೆಪ್ಟೆಂಬರ್ 1ರಂದು ಮುಂಜಾನೆ ಎಂದಿನಂತೆ ಉದ್ಯೋಗಿಗಳಿಗೆ ಬರಬೇಕಿದ್ದ ಇಮೇಲ್ ಬಾರದ ಹಿನ್ನೆಲೆಯಲ್ಲಿ Oracle ನ ಸಾವಿರಾರು ಉದ್ಯೋಗಿಗಳು ಉದ್ಯೋಗ ಕಡಿತದ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಹಿಂದೆ ಮಾರ್ಚ್ 31ರಂದು ಉದ್ಯೋಗಿಗಳಿಗೆ ಕಳುಹಿಸಲಾಗಿದ್ದ ಇಮೇಲ್ ನಲ್ಲಿ ಹಲವು ಉದ್ಯೋಗಗಳನ್ನು ರದ್ದುಪಡಿಸಿರುವ ಮಾಹಿತಿ ನೀಡಲಾಗಿತ್ತು. ಇದೇ ಅನುಭವದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಇಮೇಲ್ ಬಾರದಿರುವುದು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ ಎಂದು ವರದಿ ತಿಳಿಸಿದೆ.

ಉದ್ಯೋಗ ಕಡಿತದ ಬಗ್ಗೆ ಅಧಿಕೃತ ಮಾಹಿತಿ ಇಲ್ಲ

ಕಂಪನಿಯು ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ಸೆ.1ರಂದು ಆರಂಭವಾಗುವ ಎರಡನೇ ಆರ್ಥಿಕ ತ್ರೈಮಾಸಿಕಕ್ಕೂ ಮುನ್ನ ವೇತನ ವೆಚ್ಚ ಕಡಿತಗೊಳಿಸಲು ಉದ್ಯೋಗಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಮ್ಯಾನೇಜರ್ ಗಳಿಗೆ ಸೂಚಿಸಲಾಗಿತ್ತು ಎಂದು ಆಗಸ್ಟ್ ತಿಂಗಳ ಮಧ್ಯದಲ್ಲಿ ಬಿಸಿನೆಸ್ ಇನ್ಸೈಡರ್ ವರದಿ ಮಾಡಿತ್ತು.

ಕೆಲವು ವಿಭಾಗಗಳಲ್ಲಿ 10%ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತ್ತು. ಇದರ ಜೊತೆಗೆ, ಮಾರ್ಚ್ 31ರಂದು ಮುಂಜಾನೆ 6 ಗಂಟೆ ಸುಮಾರಿಗೆ ಉದ್ಯೋಗ ಕಡಿತದ ಇಮೇಲ್ ಬಂದಿದ್ದ ಕಹಿ ಅನುಭವವೂ ಇದೀಗ ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿದೆ.

ಯಾವುದೇ ಅಧಿಕೃತ ಮಾಹಿತಿ ಹೊರಬಾರದ ಹಿನ್ನೆಲೆಯಲ್ಲಿ, Oracle ಉದ್ಯೋಗಿಗಳು ನಿರಂತರ ನಿರೀಕ್ಷೆಯಲ್ಲಿದ್ದಾರೆ. ಕಂಪನಿಯ r/employeesOfOracle ಆನ್ಲೈನ್ ವೇದಿಕೆಯಲ್ಲಿ ಬೆಂಗಳೂರು, ಮುಂಬೈ ಹಾಗೂ ಅಮೆರಿಕದಲ್ಲಿರುವ ಉದ್ಯೋಗಿಗಳು ಗಂಟೆಗೊಮ್ಮೆ ಪರಿಸ್ಥಿತಿಯ ಬಗ್ಗೆ ಅಪ್ಡೇಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್ 31ರ ಇಮೇಲ್ ಸೃಷ್ಟಿಸಿದ ಆತಂಕ

ಹಿಂದಿನ ಕಹಿ ಅನುಭವವೇ ಇದೀಗ Oracle ಉದ್ಯೋಗಿಗಳ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಮಾರ್ಚ್ ನಲ್ಲಿ ಉದ್ಯೋಗಿಗಳಿಗೆ ಕಳುಹಿಸಿದ್ದ ಇಮೇಲ್ ನಲ್ಲಿ, “ವ್ಯಾಪಾರ ಅಗತ್ಯಗಳನ್ನು ಪರಿಗಣಿಸಿ ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಿಮ್ಮ ಹುದ್ದೆಯನ್ನು ರದ್ದುಗೊಳಿಸಲಾಗಿದೆ. ಇಂದೇ ನಿಮ್ಮ ಕೊನೆಯ ಕೆಲಸದ ದಿನ” ಎಂದು ತಿಳಿಸಲಾಗಿತ್ತು.

ಡಾಕ್ಯುಸೈನ್ ಮೂಲಕ ಅಗತ್ಯ ದಾಖಲೆಗಳಿಗೆ ಸಹಿ ಮಾಡಿದ ಬಳಿಕವಷ್ಟೇ ಪರಿಹಾರ ಧನ (Severance) ನೀಡಲಾಗುವುದು ಎಂದು ತಿಳಿಸಲಾಗಿತ್ತು. ಅಲ್ಲದೆ, ಸಿಸ್ಟಮ್ ಮತ್ತು ಫೈಲ್ ಗಳ ಪ್ರವೇಶವನ್ನು ತಕ್ಷಣವೇ ಸ್ಥಗಿತಗೊಳಿಸುವುದರಿಂದ ವೈಯಕ್ತಿಕ ಇಮೇಲ್ ವಿಳಾಸವನ್ನು ನೀಡುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿತ್ತು.

ಆ ಹಂತದಲ್ಲಿ ಅಮೆರಿಕ, ಭಾರತ, ಕೆನಡಾ ಮತ್ತು ಮೆಕ್ಸಿಕೊದಲ್ಲಿ ಸುಮಾರು 10,000 ಹುದ್ದೆಗಳನ್ನು ಕಡಿತಗೊಳಿಸಲಾಗಿತ್ತು ಎನ್ನಲಾಗಿದೆ. ಒರಾಕಲ್ ಹೆಲ್ತ್, ಕ್ಲೌಡ್, ಸೇಲ್ಸ್ ವಿಭಾಗಗಳು ಹಾಗೂ ನೆಟ್ಸೂಟ್ ಇಂಡಿಯಾ ಡೆವಲಪ್ಮೆಂಟ್ ಸೆಂಟರ್ ಗೂ ಈ ಕಡಿತದ ಪರಿಣಾಮ ಬೀರಿತ್ತು.

ವಜಾಗೊಳಿಸುವ ಮುನ್ನ ಯಾವುದೇ ಎಚ್ಆರ್ ಕರೆ ಅಥವಾ ಮ್ಯಾನೇಜರ್ ಗಳೊಂದಿಗೆ ಮುನ್ಸೂಚನಾ ಚರ್ಚೆ ನಡೆದಿರಲಿಲ್ಲ ಎನ್ನಲಾಗಿದೆ. RHS ಮತ್ತು SVOS ಸೇರಿದಂತೆ ಕೆಲವು ತಂಡಗಳಲ್ಲಿ ಕನಿಷ್ಠ 30% ಸಿಬ್ಬಂದಿಯನ್ನು ಕೈಬಿಡಲಾಗಿತ್ತು. ಹಿರಿಯ ಎಂಜಿನಿಯರ್ ಗಳು, ಆರ್ಕಿಟೆಕ್ಟ್ ಗಳು ಮತ್ತು ಪ್ರೋಗ್ರಾಂ ಮ್ಯಾನೇಜರ್‌ಗಳೂ ವಜಾಗೊಂಡಿದ್ದರು.

ಇದು ಕಾರ್ಯಕ್ಷಮತೆ ಆಧಾರಿತ ಉದ್ಯೋಗ ಕಡಿತವಾಗಿರಲಿಲ್ಲ ಎಂದು ಹಿರಿಯ ಮ್ಯಾನೇಜರ್ ಒಬ್ಬರು ಲಿಂಕ್ಡ್ಇನ್ ನಲ್ಲಿ ಬರೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor