Photo: x.com/MarioNawfal

ವಾಷಿಂಗ್ಟನ್, ಸೆ.2: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದೆ. ಇರಾನ್‌ ನ ವಿವಿಧ ನೆಲೆಗಳ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಇರಾನ್, ಜೋರ್ಡಾನ್, ಬಹ್ರೇನ್ ಮತ್ತು ಕುವೈತ್‌ ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ದಕ್ಷಿಣ ಇರಾನ್‌ನ ಸಿರಿಕ್‌ ನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದರ ಮೇಲೆ ಅಮೆರಿಕದ ಕ್ಷಿಪಣಿ ದಾಳಿಯ ಅವಶೇಷಗಳು ಬಿದ್ದಿವೆ ಎಂದು ಇರಾನ್ ಹೇಳಿದೆ.

ಈ ಘಟನೆಯಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿದ್ದಾರೆ.

ಇರಾನ್‌ ನ ಅಧಿಕೃತ ಸುದ್ದಿ ಸಂಸ್ಥೆ IRNA ಪ್ರಕಾರ, ಸಿರಿಕ್‌ ನ ಕುಹೆಸ್ತಕ್ ನಗರದಲ್ಲಿ ಮದುವೆ ನಡೆಯುತ್ತಿದ್ದ ಸ್ಥಳ ಸೇರಿದಂತೆ , ಚಬಹಾರ್ ಮತ್ತು ಕೊನಾರಕ್ ಕೌಂಟಿಗಳ ವ್ಯಾಪ್ತಿಯ ಪ್ರದೇಶಗಳ ಮೇಲೂ ನಾಲ್ಕು ಸ್ಫೋಟಕಗಳು ಬಿದ್ದಿವೆ. ಆದರೆ, ಈ ದಾಳಿಗಳಿಂದ ಎಷ್ಟು ಹಾನಿಯಾಗಿದೆ ಎಂಬುದನ್ನು ತಿಳಿಸಿಲ್ಲ.

‘ನಾಗರಿಕರನ್ನು ಗುರಿಯಾಗಿಸಿಲ್ಲ’: ಅಮೆರಿಕ

ಮದುವೆ ಸಮಾರಂಭದ ಮೇಲೆ ದಾಳಿ ನಡೆದಿರುವುದು ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡ ಆರೋಪವನ್ನು ಅಮೆರಿಕದ ಸೇನೆ ನಿರಾಕರಿಸಿದೆ.

‘IRGCಯಂತೆ ಅಮೆರಿಕದ ಸೇನೆ ಎಂದಿಗೂ ನಾಗರಿಕರನ್ನು ಗುರಿಯಾಗಿಸುವುದಿಲ್ಲ’ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿದ್ದಾರೆ.

ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಹಾಗೂ ಈ ಪ್ರದೇಶದಲ್ಲಿರುವ ಅಮೆರಿಕದ ಸೇನಾ ಸಿಬ್ಬಂದಿ ವಿರುದ್ಧ ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಡೆಸಿದ ದಾಳಿ ಪ್ರಯತ್ನಗಳಿಗೆ ಪ್ರತಿಯಾಗಿ ಅಮೆರಿಕದ ದಾಳಿ ನಡೆದಿದೆ ಎಂದು ಸೆಂಟ್‌ಕಾಮ್ ಹೇಳಿದೆ.

ರವಿವಾರದಿಂದ ಮತ್ತೆ ದಾಳಿ

ರವಿವಾರ ಅಮೆರಿಕ ಇರಾನ್‌ನ ನೆಲೆಗಳ ಮೇಲೆ ದಾಳಿ ನಡೆಸಿತು. ಹಲವು ವಾರಗಳ ಬಳಿಕ ನಡೆದ ಮೊದಲ ಅಮೆರಿಕದ ದಾಳಿ ಇದಾಗಿತ್ತು.

ಇದಕ್ಕೆ ಪ್ರತಿಯಾಗಿ ಇರಾನ್‌ ನ ಪಡೆಗಳು ಜೋರ್ಡಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ ನಲ್ಲಿರುವ ಅಮೆರಿಕದ ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡವು. ದಾಳಿಯಲ್ಲಿ ಎರಡು ತೈಲ ಟ್ಯಾಂಕರ್‌ ಗಳಿಗೂ ಸ್ಫೋಟಕಗಳು ಬಡಿದವು. ಮಂಗಳವಾರ ಅಮೆರಿಕ ಮತ್ತೆ ಹಲವು ದಾಳಿಗಳನ್ನು ನಡೆಸಿತು.

ದಕ್ಷಿಣ ಇರಾನ್‌ ನ ಹಾರ್ಮುಝ್ ಜಲಸಂಧಿಯ ಉದ್ದಕ್ಕೂ ಮತ್ತು ಕೊಲ್ಲಿಯಲ್ಲಿರುವ ದ್ವೀಪವೊಂದರಲ್ಲಿ ಸ್ಫೋಟಗಳ ಸದ್ದು ಕೇಳಿಸಿತು. ದಕ್ಷಿಣ ಇರಾನ್‌ ನ ಕೆರ್ಮನ್ ಪ್ರಾಂತ್ಯದಲ್ಲಿರುವ ವಿಮಾನ ನಿಲ್ದಾಣದ ಮೇಲೂ ಅಮೆರಿಕ ದಾಳಿ ನಡೆಸಿದೆ ಎಂದು ಇರಾನ್‌ ನ ಸರ್ಕಾರಿ ಟಿವಿ ವರದಿ ಮಾಡಿದೆ.

ಟ್ರಂಪ್ ಹೇಳಿದ್ದೇನು?

ಹಾರ್ಮುಝ್ ಜಲಸಂಧಿಯಲ್ಲಿ ಸಮುದ್ರ ಗಣಿಗಳನ್ನು ಹಾಕಲು ಇರಾನ್ ನಡೆಸಿದ ವಿಫಲ ಪ್ರಯತ್ನಕ್ಕೆ ಪ್ರತಿಯಾಗಿ ಅಮೆರಿಕ ದಾಳಿ ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದಲ್ಲದೆ, ಜೋರ್ಡಾನ್‌ ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ಎಂಟು ಕ್ಷಿಪಣಿಗಳನ್ನು ಉಡಾಯಿಸಿತ್ತು. ಆ ಎಲ್ಲ ಕ್ಷಿಪಣಿಗಳನ್ನೂ ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್‌ನ ಈ ಕ್ರಮಗಳಿಗೆ ಪ್ರತಿಯಾಗಿ ಅಮೆರಿಕ ‘ದೊಡ್ಡ ಮತ್ತು ಶಕ್ತಿಯುತ’ ದಾಳಿಗಳನ್ನು ನಡೆಸಿದೆ ಎಂದು ಅವರು ಹೇಳಿದ್ದಾರೆ.

ಇರಾನ್‌ ನಿಂದ ಪ್ರತೀಕಾರ

ಜೋರ್ಡಾನ್‌ನಲ್ಲಿರುವ ಅಮೆರಿಕದ ಮೆರೈನ್ ಕಾರ್ಪ್ಸ್‌ ನ ಕ್ಯಾಂಪ್ ಟಿಟಿನ್ ನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ತೀವ್ರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ ಎಂದು IRGC ಹೇಳಿದೆ. ಇರಾನ್‌ ನ ತಸ್ನಿಮ್ ಸುದ್ದಿ ಸಂಸ್ಥೆ ಈ ವರದಿ ಮಾಡಿದೆ.

ಇರಾನ್‌ ನಿಂದ ಉಡಾಯಿಸಲಾದ ಕನಿಷ್ಠ 10 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎಂದು ಜೋರ್ಡಾನ್ ಸೇನೆ ತಿಳಿಸಿದೆ.

ಇಸ್ರೇಲ್ ಮತ್ತು ಸೌದಿ ಅರೇಬಿಯಾ ಗಡಿಗಳ ಸಮೀಪದ ಅಕಾಬಾ ಕೊಲ್ಲಿಯಲ್ಲಿರುವ ಅಮೆರಿಕದ ತರಬೇತಿ ಶಿಬಿರಕ್ಕೆ ಕ್ಷಿಪಣಿ ಬಡಿದಿರುವುದು ದೃಢಪಟ್ಟಿಲ್ಲ. ಯಾರಿಗೂ ಗಾಯವಾಗಿರುವ ಬಗ್ಗೆಯೂ ಮಾಹಿತಿ ಇಲ್ಲ. ಇನ್ನೂ ಮೂರು ಕ್ಷಿಪಣಿಗಳು ದೂರದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ಜೋರ್ಡಾನ್ ಸೇನೆ ಹೇಳಿದೆ.

ಕುವೈತ್ ಮತ್ತು ಬಹ್ರೇನ್‌ ನಲ್ಲೂ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ನಡೆದಿರುವ ವರದಿಗಳು ಬಂದಿವೆ.

ಬಹ್ರೇನ್‌ ನಲ್ಲಿ ಎಚ್ಚರಿಕೆ

ಬಹ್ರೇನ್‌ ನ ಆಂತರಿಕ ಸಚಿವಾಲಯ ಸಂಭಾವ್ಯ ಬೆದರಿಕೆಯ ಕುರಿತು ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ನಾಗರಿಕರು ಮತ್ತು ನಿವಾಸಿಗಳು ಶಾಂತವಾಗಿರುವಂತೆ ಹಾಗೂ ಸಮೀಪದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅನುಸರಿಸುವಂತೆ ಸಚಿವಾಲಯ ‘ಎಕ್ಸ್‌’ನಲ್ಲಿ ಮನವಿ ಮಾಡಿದೆ.

‘ಅಮೆರಿಕಕ್ಕೆ ಮರೆಯಲಾಗದ ಪಾಠ’

ನೇರ ಬಾಂಬ್ ದಾಳಿಗಳು ಪುನರಾರಂಭಗೊಂಡ ಬಳಿಕ ಮೊದಲ ಬಾರಿಗೆ ಸಂದೇಶ ನೀಡಿರುವ ಇರಾನ್‌ ನ ಸುಪ್ರೀಂ ನಾಯಕ ಮೊಜ್ತಬಾ ಖಾಮಿನೈ, ಅಮೆರಿಕಕ್ಕೆ ‘ಮರೆಯಲಾಗದ ಪಾಠಗಳನ್ನು’ ಕಲಿಸಲು ಇರಾನ್‌ ನ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದು ಹೇಳಿದ್ದಾರೆ.

IRGC ವಕ್ತಾರ ಹೊಸೇನ್ ಮೊಹೆಬಿ ಕೂಡ ಅಮೆರಿಕ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

‘ಅಮೆರಿಕ ತನ್ನ ಹೊಸ ದಾಳಿಗಳಿಗೆ ವಿಷಾದಿಸಲಿದೆ. ಆಕ್ರಮಣಕಾರರಿಗೆ ಕಠಿಣ ಶಿಕ್ಷೆ ಕಾದಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ದಾಳಿ ಮುಂದುವರಿಯಲಿದೆ’: ಇರಾನ್

ಇರಾನ್‌ ನ ಖಾತಮ್ ಅಲ್-ಅಂಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಕರ್ನಲ್ ಇಬ್ರಾಹಿಂ ಜೊಲ್ಫಾಘರಿ, ಈ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿದ್ದಾರೆ.

ಈ ದಾಳಿಗಳಿಂದ ಮೂಲಸೌಕರ್ಯ, ಸೌಲಭ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಸೇನಾ ಉಪಕರಣಗಳಿಗೆ ಭಾರಿ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

‘ಗಮನಾರ್ಹ ಸಂಖ್ಯೆಯ’ ಅಮೆರಿಕದ ಕಮಾಂಡರ್‌ ಗಳು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ.

‘ಅಮೆರಿಕನ್ನರ ವಿರುದ್ಧದ ಈ ಕಾರ್ಯಾಚರಣೆಗಳು ಅವರು ತಮ್ಮ ಅಪರಾಧಗಳಿಗೆ ವಿಷಾದಿಸುವವರೆಗೆ ಮುಂದುವರಿಯುತ್ತವೆ’ ಎಂದು ಜೊಲ್ಫಾಘರಿ ಹೇಳಿದ್ದಾರೆ.

ಅಮೆರಿಕ ಮತ್ತೆ ದಾಳಿ ನಡೆಸಿದರೆ ಅದಕ್ಕೆ ‘ಭಾರಿ, ವ್ಯಾಪಕ ಮತ್ತು ಹೆಚ್ಚು ವಿನಾಶಕಾರಿ’ ಪ್ರತಿಕ್ರಿಯೆ ನೀಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅಮೆರಿಕದ ಸೇನೆಯೊಂದಿಗೆ ಸಹಕರಿಸುವ ಯಾವುದೇ ದೇಶವೂ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಆರು ತಿಂಗಳಿಂದ ಯುದ್ಧ

ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಯುದ್ಧ ಫೆಬ್ರವರಿ ಅಂತ್ಯದಲ್ಲಿ ಆರಂಭವಾಯಿತು. ಇರಾನ್‌ ನ ಸುಪ್ರೀಂ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರನ್ನು ಹತ್ಯೆಗೈದ ಅಮೆರಿಕ ಮತ್ತು ಇಸ್ರೇಲ್‌ ನ ದಾಳಿಯೊಂದಿಗೆ ಯುದ್ಧ ತೀವ್ರಗೊಂಡಿತು.

ಯುದ್ಧ ಆರಂಭವಾಗಿ ಸುಮಾರು ಆರು ತಿಂಗಳು ಕಳೆದಿವೆ. ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿದೆ. ಅಮೆರಿಕ ಇರಾನ್‌ ನ ಬಂದರುಗಳ ಮೇಲೆ ಪ್ರತಿದಿಗ್ಬಂಧನ ಮುಂದುವರಿಸಿದೆ.

ಹಾರ್ಮುಝ್ ಜಲಸಂಧಿ ಮುಚ್ಚಿರುವುದರಿಂದ ಜಾಗತಿಕ ತೈಲ ಪೂರೈಕೆಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor