×
Ad

ಭ್ರಷ್ಟಾಚಾರ ಆರೋಪ : ಭಾರತೀಯ ಮೂಲದ ಸಿಂಗಾಪುರ ಸಚಿವ ಈಶ್ವರನ್ ರಾಜೀನಾಮೆ

Update: 2024-01-18 22:54 IST

ಎಸ್.ಈಶ್ವರನ್ |  Photo: NDTV 

ಸಿಂಗಾಪುರ : ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸಿಂಗಾಪುರದ ಭಾರತೀಯ ಮೂಲದ ಸಾರಿಗೆ ಸಚಿವ ಎಸ್.ಈಶ್ವರನ್ ಅವರು ಗುರುವಾರ ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿಗೆ ರಾಜೀನಾಮೆ ನೀಡಿದ್ದಾರೆ.

61 ವರ್ಷ ವಯಸ್ಸಿನ ಈಶ್ವರನ್ ಅವರು ಸಂಸತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ ಎಂದು ‘ ದಿ ಸ್ಟ್ರೈಟ್ ಟೈಮ್ಸ್’ ವರದಿ ಮಾಡಿದೆ. ಸಿಂಗಾಪುರದ ಭ್ರಷ್ಟಾಚಾರ ತನಿಖಾ ದಳವು ನಡೆಸಿದ ತನಿಖೆಯ ಭಾಗವಾಗಿ ಈಶ್ವರನ್ ಅವರನ್ನು ಕಳೆದ ವರ್ಷದ ಜುಲೈ 11ರಂದು ಬಂಧಿಸಲಾಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿ ರಿಯಲ್ ಎಸ್ಟೇಟ್ ಉದ್ಯಮಿ ಆಗ್ ಬೆಂಗ್ ಸೆಂಗ್ ಅವರನ್ನು ಬಂಧಿಸಲಾಗಿತ್ತು ಹಾಗೂ ಈಶ್ವರನ್ ಜೊತೆಗಿನ ಅವರಿಗಿರುವ ನಂಟಿನ ಬಗ್ಗೆ ವಿಚಾರಣೆ ನಡೆಸಲಾಗಿತ್ತು.

ಈಶ್ವರನ್ ಅವರು ಜನವರಿ 16ರಂದು ಆಡಳಿತ ಪಕ್ಷಕ್ಕೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು ಅದರಲ್ಲಿ. ತನ್ನ ವಿರುದ್ಧ ಭ್ರಷ್ಟಾಚಾರ ತನಿಖಾ ದಳವು ಹೊರಿಸಿದ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.

‘‘ ದೋಷಾರೋಪಪಟ್ಟಿಯಲ್ಲಿ ನನ್ನ ವಿರುದ್ಧ ಎಲ್ಲಾ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಈಗ ನಾನು ದೋಷಮುಕ್ತನಾಗುವ ಬಗ್ಗೆ ಗಮನವನ್ನು ಹರಿಸುತ್ತಿದ್ದೇನೆ. ಆದರೆ ಸಂದರ್ಭಕ್ಕೆ ಅನುಸಾರವಾಗಿ ಸಂಪುಟಕ್ಕೆ ಹಾಗೂ ಸಂಸತ್ ಮತ್ತು ಪಿಎಪಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದು ಸೂಕ್ತವೆಂದು ನಾನು ಭಾವಿಸುತ್ತೇನೆ’’ ಎಂದು ಈಶ್ವರನ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಸಿಂಗಾಪುರ ಗ್ರಾಂಡ್ಪ್ರಿಕ್ಸ್ ಕಾರ್ ರೇಸ್ ಹಾಗೂ ಸಿಂಗಾಪುರದ ಪ್ರವಾಸೋದ್ಯಮ ಮಂಡಳಿಯ ಜೊತೆಗಿನ ಒಪ್ಪಂದದಲ್ಲಿ ಹೊಟೇಲ್ ಉದ್ಯಮಿ ಓಂಗ್ ಅವರ ಹಿತಾಸಕ್ತಿಗಳನ್ನು ಪೋಷಿಸಲು ಅವರಿಂದ 1.60 ಲಕ್ಷ ಸಿಂಗಾಪುರ ಡಾಲರ್ ಮೊತ್ತದ ಲಂಚವನ್ನು ಸ್ವೀಕರಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಓಂಗ್ ಅವರಿಂದ 2.18 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವೀಕರಿಸಿದ್ದು ಸೇರಿದಂತೆ 24 ಆರೋಪಗಳನ್ನು ಎದುರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News