ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಪಂದ್ಯಗಳ ವೇಳೆ ಫೆಲೆಸ್ತೀನ್ ಪರ ಬ್ಯಾನರ್ ಪ್ರದರ್ಶನ: ಇಸ್ರೇಲ್ ದೂರಿಗೆ ಗಲಾಟಸರಾಯ್ ವಿರೋಧ
Photo Credit :aljazeera.com
ಇಸ್ತಾನ್‌ಬುಲ್: ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಪಂದ್ಯಗಳ ವೇಳೆ ಫೆಲೆಸ್ತೀನ್ ಜನರಿಗೆ ಬೆಂಬಲ ಸೂಚಿಸುವ ಬ್ಯಾನರ್ ಗಳನ್ನು ಪ್ರದರ್ಶಿಸುತ್ತಿರುವ ತಮ್ಮ ಅಭಿಮಾನಿಗಳ ವಿರುದ್ಧ ಇಸ್ರೇಲ್ ಸರಕಾರ UEFAಗೆ ಸಲ್ಲಿಸಿರುವ ದೂರನ್ನು ತುರ್ಕಿಯೆಯ ಫುಟ್‌ಬಾಲ್ ಕ್ಲಬ್ ಗಲಾಟಸರಾಯ್ ವಿರೋಧಿಸಿದೆ.
ಮಂಗಳವಾರ ಆಸ್ಟನ್ ವಿಲ್ಲಾ ವಿರುದ್ಧದ ಪಂದ್ಯದ ಮೊದಲು, ಅಭಿಮಾನಿಗಳು ಫೆಲೆಸ್ತೀನ್ ಪರ ಬ್ಯಾನರ್ ಗಳನ್ನು ಪ್ರದರ್ಶಿಸುತ್ತಿರುವ ಕುರಿತು ಇಸ್ರೇಲ್ ಸರಕಾರ ದೂರು ಸಲ್ಲಿಸಿರುವುದಾಗಿ ಯುರೋಪಿಯನ್ ಫುಟ್‌ಬಾಲ್ ನ ಆಡಳಿತ ಮಂಡಳಿಯಾದ UEFA ಕ್ಲಬ್ ಗೆ ಮಾಹಿತಿ ನೀಡಿದೆ ಎಂದು ಗಲಾಟಸರಾಯ್ ಅಧ್ಯಕ್ಷ ಡರ್ಸನ್ ಓಜ್ಬೆಕ್ ತಿಳಿಸಿದ್ದಾರೆ.
"ಫೆಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿ ನಮ್ಮ ಅಭಿಮಾನಿಗಳು ಪ್ರದರ್ಶಿಸಿದ ಬ್ಯಾನರ್ ಗಳ ಕುರಿತು ನೆತನ್ಯಾಹು ಸರಕಾರವು UEFAಗೆ ನಮ್ಮ ಕ್ಲಬ್ ವಿರುದ್ಧ ದೂರು ಸಲ್ಲಿಸಿದೆ ಎಂಬ ಮಾಹಿತಿ ನಮಗೆ ದೊರೆತಿದೆ" ಎಂದು ಅವರು ತುರ್ಕಿಯೆಯ ಪ್ರಸಾರ ಸಂಸ್ಥೆ ಎಚ್‌ಟಿ ಸ್ಪೋರ್ ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ತುರ್ಕಿಯೆ ರಾಷ್ಟ್ರವಾಗಿ ನಾವು ಇತಿಹಾಸದುದ್ದಕ್ಕೂ ದಮನಿತರ ಪರವಾಗಿ ನಿಂತಿದ್ದೇವೆ. ಫೆಲೆಸ್ತೀನ್ ಜನರ ಸಂಕಷ್ಟದ ಮುಂದೆ ಮೌನವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಗಲಾಟಸರಾಯ್ ಅಭಿಮಾನಿಗಳು ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳ ವೇಳೆ ಫೆಲೆಸ್ತೀನ್ ಗೆ ಬೆಂಬಲ ಸೂಚಿಸುವ ಮತ್ತು ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಯುದ್ಧವನ್ನು ಖಂಡಿಸುವ ಬ್ಯಾನರ್ ಗಳನ್ನು ನಿಯಮಿತವಾಗಿ ಪ್ರದರ್ಶಿಸುತ್ತಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಗಲಾಟಸರಾಯ್ 1-0 ಗೋಲುಗಳಿಂದ ಆಸ್ಟನ್ ವಿಲ್ಲಾವನ್ನು ಸೋಲಿಸಿತು. ಈ ವೇಳೆ ತಂಡದ ತವರು ಮೈದಾನ ರಾಮ್ಸ್ ಪಾರ್ಕ್ ನಲ್ಲಿ ಫೆಲೆಸ್ತೀನ್ ಪರ ಬ್ಯಾನರ್ ಗಳು ರಾರಾಜಿಸಿದವು. 'ಗಾಝಾವನ್ನು ಎಂದಿಗೂ ಮರೆಯಬೇಡಿ, ನರಮೇಧದ ವಿರುದ್ಧ ಮೌನವಾಗಿರಬೇಡಿ!', 'ಮಾನವೀಯತೆಯ ಘನತೆ, ಗೌರವ ಮತ್ತು ಹೆಮ್ಮೆ ನೀವೇ, ಓ ಗಾಝಾ', 'ಗಾಝಾದ ಶಿಶುಗಳನ್ನು ಬದುಕಲು ಬಿಡಿ' ಹಾಗೂ 'ಫೆಲೆಸ್ತೀನ್ ಗೆ ಸ್ವಾತಂತ್ರ ನೀಡಿ' ಎಂಬ ಸಂದೇಶಗಳನ್ನು ಬ್ಯಾನರ್ ಗಳಲ್ಲಿ ಪ್ರದರ್ಶಿಸಲಾಗಿತ್ತು.
ಜಗತ್ತಿನಾದ್ಯಂತ ಫೆಲೆಸ್ತೀನ್ ಜನರು ಎದುರಿಸುತ್ತಿರುವ ದಬ್ಬಾಳಿಕೆಯ ವಿರುದ್ಧ ಎದ್ದಿರುವ ಸಾಮೂಹಿಕ ಧ್ವನಿಯು ರಾಜಕೀಯ ನಿಲುವಲ್ಲ, ಬದಲಾಗಿ ಮಾನವೀಯ ಮತ್ತು ನೈತಿಕ ನಿಲುವು ಎಂದು ಓಜ್ಬೆಕ್ ಹೇಳಿದ್ದಾರೆ. ಈ ಸೂಕ್ಷ್ಮತೆಯನ್ನು UEFA ಕೂಡ ಅರ್ಥಮಾಡಿಕೊಂಡು, ರಾಜಕೀಯ ಕಾರಣಗಳಿಗಾಗಿ ಸಲ್ಲಿಸಿರುವ ದೂರನ್ನು ನಿರ್ಲಕ್ಷಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
"ಫುಟ್‌ಬಾಲ್ ಅನ್ನು ರಾಜಕೀಯದಿಂದ ಮುಕ್ತವಾಗಿಡುವುದು ಎಂದರೆ ಮಾನವೀಯ ಮತ್ತು ನೈತಿಕ ನಿಲುವುಗಳನ್ನು ಶಿಕ್ಷಿಸುವುದಲ್ಲ. ಬದಲಾಗಿ, ಫುಟ್‌ಬಾಲ್ ರಾಜಕೀಯ ಒತ್ತಡಕ್ಕೆ ಒಳಗಾಗದಂತೆ ತಡೆಯುವುದಾಗಿದೆ" ಎಂದು ಅವರು ಹೇಳಿದ್ದಾರೆ.
ತುರ್ಕಿಯೆಯ ಯುವಜನ ಮತ್ತು ಕ್ರೀಡಾ ಸಚಿವ ಉಸ್ಮಾನ್ ಬಕ್ ಕೂಡ ಗಲಾಟಸರಾಯ್ ಅಭಿಮಾನಿಗಳ ನಿಲುವನ್ನು ಶ್ಲಾಘಿಸಿದ್ದಾರೆ.
"ಸ್ಟೇಡಿಯಂನ ಗ್ಯಾಲರಿಗಳಿಂದಲೇ ಫೆಲೆಸ್ತೀನ್ ಜನರೊಂದಿಗಿನ ತಮ್ಮ ಒಗ್ಗಟ್ಟನ್ನು ಇಡೀ ಜಗತ್ತಿಗೆ ಸಾರಿದ ನಮ್ಮ ಗಲಾಟಸರಾಯ್ ಅಭಿಮಾನಿಗಳ ತಾತ್ವಿಕ ಮತ್ತು ಗೌರವಯುತ ನಿಲುವಿಗೆ ನಾನು ಗೌರವ ಸಲ್ಲಿಸುತ್ತೇನೆ" ಎಂದು ಅವರು ಸಾಮಾಜಿಕ ಜಾಲತಾಣ 'X'ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಫೆಲೆಸ್ತೀನ್ ಜನರ ಮೇಲೆ ಇಸ್ರೇಲ್ ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ನಾವು ಮೌನವಾಗಿರುವುದಿಲ್ಲ. ಹಕ್ಕುಗಳು ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ದೃಢವಾಗಿ ಮುಂದುವರಿಸುತ್ತೇವೆ" ಎಂದು ತಿಳಿಸಿದ್ದಾರೆ.
ಈ ಬ್ಯಾನರ್ ಗಳ ಕುರಿತು ಇಸ್ರೇಲ್ ಸಲ್ಲಿಸಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡುವಂತೆ Aljazeera ಮಾಡಿರುವ ಮನವಿಗೆ UEFA ಇನ್ನೂ ಉತ್ತರಿಸಿಲ್ಲ.