ಐಸೆನ್‍ಕೋಟ್ ಜೊತೆಗಿನ ಮೈತ್ರಿ ಮಾತುಕತೆ ಸ್ಥಗಿತಗೊಳಿಸಿದ ಇಸ್ರೇಲ್‍ನ ಎಡಪಂಥೀಯ ಪಕ್ಷ
ಗಾಡಿ ಐಸೆನ್‍ಕೋಟ್ | Photo Credit : AP
ಜೆರುಸಲೆಮ್: ಹೊಸ ಸರಕಾರ ರಚಿಸುವ ಪ್ರಯತ್ನದ ಹೊಣೆ ಹೊತ್ತಿರುವ ಗಾಡಿ ಐಸೆನ್‍ಕೋಟ್ ಅವರ `ಯಶರ್' ಪಕ್ಷದೊಂದಿಗಿನ ಮೈತ್ರಿ ಮಾತುಕತೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಇಸ್ರೇಲ್‍ನ ಎಡಪಂಥೀಯ `ಡೆಮೋಕ್ರಾಟ್ಸ್' ಪಕ್ಷ ಪ್ರಕಟಿಸಿದೆ.
ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಐಸೆನ್‍ಕೋಟ್ ಅವರಿಗಾಗಲಿ ಅಥವಾ ನಿರ್ಗಮಿತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗಾಗಲಿ ಸ್ಪಷ್ಟ ಬಹುಮತ ದೊರೆತಿರಲಿಲ್ಲ. ಕಳೆದ ಕೆಲವು ದಿನಗಳಲ್ಲಿ, ಸಂಭಾವ್ಯ ಮೈತ್ರಿ ಕುರಿತು ಚರ್ಚಿಸಲು ಯಶರ್ ಮತ್ತು ನೆತನ್ಯಾಹು ಅವರ `ಲಿಕುಡ್' ಪಕ್ಷಗಳು ಮೂರು ಸುತ್ತಿನ ಮಾತುಕತೆ ನಡೆಸಿವೆ.
`ನೆತನ್ಯಾಹು ಅವರೊಂದಿಗೆ ಏಕತಾ ಸರಕಾರ ರಚಿಸುವ ನಿಟ್ಟಿನಲ್ಲಿ ಐಸೆನ್‍ಕೋಟ್ ನಡೆಸುತ್ತಿರುವ ಮಾತುಕತೆಗಳಲ್ಲಿ ಪ್ರಗತಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಯಶರ್ ಪಕ್ಷದೊಂದಿಗಿನ ಮಾತುಕತೆಯನ್ನು ಅಮಾನತುಗೊಳಿಸುತ್ತಿದ್ದೇವೆ ' ಎಂದು ಡೆಮೋಕ್ರಾಟ್ಸ್ ಪಕ್ಷ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಮಾಜಿ ಸೇನಾ ಮೇಜರ್ ಜನರಲ್ ಯಾಯರ್ ಗೋಲನ್ ನೇತೃತ್ವದ ಈ ಪಕ್ಷವು, ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಲುವಾಗಿ ಎರಡು ಅರಬ್-ಬಹುಸಂಖ್ಯಾತ ಪಕ್ಷಗಳೊಂದಿಗೆ ಸೇರಿ ಮೈತ್ರಿ ಸರಕಾರ ರಚಿಸುವಂತೆ ಐಸೆನ್‍ಕೋಟ್ ಅವರ ಮೇಲೆ ಒತ್ತಡ ಹೇರಿತ್ತು.