×
Ad

‘ವೆನೆಝುವೆಲಾವನ್ನು ನಾವು ಮುನ್ನಡೆಸುತ್ತೇವೆ: ಡೊನಾಲ್ಡ್ ಟ್ರಂಪ್

ವೆನೆಝುವೆಲಾದ ತೈಲ ವಲಯದ ಪುನರ್‌ನಿರ್ಮಾಣ ಮಾಡಲಾಗುವುದು ಎಂದ ಅಮೆರಿಕ ಅಧ್ಯಕ್ಷ

Update: 2026-01-03 23:11 IST

ಡೊನಾಲ್ಡ್ ಟ್ರಂಪ್ | Photo Credit : AP \ PTI 

ಫ್ಲೋರಿಡಾ/ವಾಷಿಂಗ್ಟನ್: ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆಯಲು ಕಾರಣವಾದ ರಾತ್ರೋರಾತ್ರಿ ನಡೆದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ವೆನೆಝುವೆಲಾವನ್ನು ಅಮೆರಿಕವೇ ನಡೆಸಲಿದೆ ಎಂದು ಹೇಳಿದ್ದಾರೆ.

ಫ್ಲೋರಿಡಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ದೇಶದಲ್ಲಿ ಸುರಕ್ಷಿತ, ಸರಿಯಾದ ಹಾಗೂ ವಿವೇಚನಾಯುಕ್ತ ಪರಿವರ್ತನೆ ಜಾರಿಗೆ ಬರುವವರೆಗೆ ಅಮೆರಿಕ ವೆನೆಝುವೆಲಾದ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳಲಿದೆ ಎಂದು ಹೇಳಿದರು. ಆದರೆ ಈ ಪರಿವರ್ತನೆ ಪ್ರಕ್ರಿಯೆಯ ಸ್ವರೂಪ ಅಥವಾ ಅವಧಿಯ ಕುರಿತು ಅವರು ಯಾವುದೇ ವಿವರ ನೀಡಲಿಲ್ಲ.

“ಸರಿಯಾದ ಪರಿವರ್ತನೆ ಸಾಧ್ಯವಾಗುವವರೆಗೆ ನಾವು ಆ ದೇಶವನ್ನು ನಡೆಸುತ್ತೇವೆ,” ಎಂದು ಟ್ರಂಪ್ ಹೇಳಿದರು.

ರಾತ್ರೋರಾತ್ರಿ ನಡೆಸಿದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ಟ್ರಂಪ್ ಶ್ಲಾಘಿಸಿದರು. ಇದನ್ನು ಅವರು “ಅಮೆರಿಕದ ಇತಿಹಾಸದಲ್ಲಿನ ಅತ್ಯಂತ ಬೆರಗುಗೊಳಿಸುವ ದಾಳಿಗಳಲ್ಲಿ ಒಂದು” ಹಾಗೂ “ಅಮೆರಿಕದ ಮಿಲಿಟರಿ ಶಕ್ತಿ ಮತ್ತು ಸಾಮರ್ಥ್ಯದ ಪರಿಣಾಮಕಾರಿ ಪ್ರದರ್ಶನ” ಎಂದು ಅವರು ಹೇಳಿದರು.

ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸಿದ ಅಮೆರಿಕದ ಪಡೆಗಳು ರಾತ್ರಿಯ ಕತ್ತಲಿನಲ್ಲಿ ಮಡುರೊ ಅವರನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿವೆ ಎಂದು ಟ್ರಂಪ್ ಹೇಳಿದರು. ಈ ಕಾರ್ಯಾಚರಣೆಯಿಂದ ವೆನೆಝುವೆಲಾದ ಮಿಲಿಟರಿ ಸಾಮರ್ಥ್ಯಗಳು ಬಲಹೀನಗೊಂಡಿವೆ ಎಂದೂ ಅವರು ಹೇಳಿದರು.

“ಇಷ್ಟು ಕಡಿಮೆ ಅವಧಿಯಲ್ಲಿ ಅಮೆರಿಕ ಸಾಧಿಸಿದ್ದನ್ನು ವಿಶ್ವದ ಯಾವುದೇ ರಾಷ್ಟ್ರ ಸಾಧಿಸಲು ಸಾಧ್ಯವಿಲ್ಲ,” ಎಂದು ಟ್ರಂಪ್ ಅಭಿಪ್ರಾಯಪಟ್ಟರು.

ಮಡುರೊ ಅವರ ಆಡಳಿತವನ್ನು “ಭಯಾನಕ ಮತ್ತು ಉಸಿರುಕಟ್ಟುವ” ಎಂದು ಟೀಕಿಸಿದ ಟ್ರಂಪ್, ಈ ಕಾರ್ಯಾಚರಣೆಯ ಉದ್ದೇಶ ವೆನೆಝುವೆಲಾದ ಜನರಿಗೆ ಶಾಂತಿ ಮತ್ತು ಸ್ಥಿರತೆ ಒದಗಿಸುವುದೇ ಎಂದು ಪ್ರಶ್ನಿಸಿದರು.

“ನಾವು ವೆನೆಝುವೆಲಾದ ಜನರಿಗೆ ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಬಯಸುತ್ತೇವೆ,” ಎಂದು ಅವರು ಹೇಳಿದರು. ಅಮೆರಿಕದಲ್ಲಿ ವಾಸಿಸುತ್ತಿರುವ ಅನೇಕ ವೆನೆಝುವೆಲಾದವರು ತಮ್ಮ ತಾಯ್ನಾಡಿಗೆ ಮರಳಲು ಬಯಸುತ್ತಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದರು.

ವೆನೆಝುವೆಲಾದ ಜನರ ಹಿತಾಸಕ್ತಿಗಳನ್ನು ಲೆಕ್ಕಿಸದೆ ಬೇರೆ ಯಾರಾದರೂ ಆ ದೇಶದ ನಿಯಂತ್ರಣ ಪಡೆಯಲು ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು. “ದಶಕಗಳ ಕಾಲ ಜನರ ಹಿತವನ್ನು ಗಮನಿಸದ ಯಾರಿಗೂ ವೆನೆಝುವೆಲಾವನ್ನು ವಶಪಡಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ,” ಎಂದು ಅವರು ಹೇಳಿದರು.

ಪರಿವರ್ತನಾ ಅವಧಿಯಲ್ಲೂ ಅಮೆರಿಕದ ಉಪಸ್ಥಿತಿ ಮುಂದುವರಿಯಲಿದೆ ಎಂದು ಟ್ರಂಪ್ ತಿಳಿಸಿದರು.“ಸರಿಯಾದ ಪರಿವರ್ತನೆ ಪೂರ್ಣಗೊಳ್ಳುವವರೆಗೆ ನಾವು ಅಲ್ಲಿಯೇ ಇರುತ್ತೇವೆ,” ಎಂದರು.

ವೆನೆಝುವೆಲಾದ ವಿಶಾಲ ತೈಲ ನಿಕ್ಷೇಪಗಳನ್ನು ಉಲ್ಲೇಖಿಸಿದ ಟ್ರಂಪ್, ಅಮೆರಿಕದ ತೈಲ ಕಂಪೆನಿಗಳು ಆ ದೇಶದ ತೈಲ ವಲಯದ ಪುನರ್‌ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು. ಶತಕೋಟಿ ಡಾಲರ್‌ಗಳ ಹೂಡಿಕೆ ಮೂಲಕ ಹಾನಿಗೊಳಗಾದ ತೈಲ ಮೂಲಸೌಕರ್ಯವನ್ನು ಪುನರ್ ನಿರ್ಮಿಸಿ ದೇಶಕ್ಕೆ ಆದಾಯ ತರಲಾಗುವುದು ಎಂದು ಅವರು ತಿಳಿಸಿದರು.

ಅಗತ್ಯವಿದ್ದರೆ ಮತ್ತಷ್ಟು ಮಿಲಿಟರಿ ಕ್ರಮಕ್ಕೆ ಅಮೆರಿಕ ಸಿದ್ಧವಿದೆ ಎಂಬುದನ್ನೂ ಟ್ರಂಪ್ ಉಲ್ಲೇಖಿಸಿದರು. ಎರಡನೇ ಹಾಗೂ ಇನ್ನೂ ದೊಡ್ಡ ದಾಳಿಯನ್ನು ನಡೆಸುವ ಯೋಜನೆ ಇದ್ದರೂ, ಅಂತಿಮವಾಗಿ ಅದರ ಅಗತ್ಯ ಬೀಳಲಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News