×
Ad

Venezuela ತೈಲರಂಗದ ಮೇಲೆ ಅಮೆರಿಕ ಹಿಡಿತದಿಂದ ಭಾರತಕ್ಕೆ ಲಾಭ?

►ವೆನೆಝುವೆಲಾದಲ್ಲಿ ಭಾರತೀಯ ಕಂಪೆನಿಗಳಿಂದ ಕಚ್ಚಾ ತೈಲ ಉತ್ಪಾದನೆ ಪುನಾರಂಭ ಸಾಧ್ಯತೆ ►ಮಡುರೊ ಸರಕಾರ ಬಾಕಿಯಿರಿಸಿದ್ದ 1 ಶತಕೋಟಿ ಡಾಲರ್ ಮರುಪಾವತಿಯ ನಿರೀಕ್ಷೆ

Update: 2026-01-04 22:10 IST

 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ.4: ನಿಕೋಲಾಸ್ ಮಡುರೊ ಪದಚ್ಯುತಿಯ ಬಳಿಕ ಆ ದೇಶದ ತೈಲವಲಯದ ಮೇಲೆ ಅಮೆರಿಕ ಹಿಡಿತ ಸಾಧಿಸಿರುವುದು, ಭಾರತದ ಮಹತ್ವದ ಆರ್ಥಿಕ ಹಾಗೂ ಆಯಕಟ್ಟಿನ ದೃಷ್ಟಿಯಿಂದ ಲಾಭವನ್ನು ತಂದುಕೊಡಲಿದೆ. ಇದರಿಂದಾಗಿ ವೆನೆಝುವೆಲಾದಿಂದ ದೀರ್ಘ ಸಮಯದಿಂದ ಬಾಕಿಯಿರುವ 1 ಶತಕೋಟಿ ಡಾಲರ್ ಹಣವನ್ನು ವಸೂಲಿ ಮಾಡಲು ಭಾರತಕ್ಕೆ ಸಾಧ್ಯವಾಗಲಿದೆ ಮತ್ತು ಭಾರತೀಯ ಕಂಪೆನಿಗಳು ನಿರ್ವಹಿಸುತ್ತಿರುವ ತೈಲಬಾವಿಗಳಲ್ಲಿ ಕಚ್ಚಾ ತೈಲದ ಉತ್ಪಾದನೆಯನ್ನು ಪುನಾರಂಭಿಸಲು ಸಹಾಯವಾಗಲಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ವಿಶ್ಲೇಷಕರು ತಿಳಿಸಿದ್ದಾರೆ.

ಭಾರತವು ಒಂದೊಮ್ಮೆ ವೆನೆಝುವೆಲಾದ ಕಚ್ಚಾ ತೈಲದ ಅತಿ ದೊಡ್ಡ ಗ್ರಾಹಕನಾಗಿದ್ದು, ವ್ಯಾಪಾರದ ಉತ್ತುಂಗಾವಸ್ಥೆಯಲ್ಲಿ ಪ್ರತಿ ದಿನ 4 ಲಕ್ಷ ಬ್ಯಾರೆಲ್‌ಗೂ ಅಧಿಕ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ 2020ರಲ್ಲಿ ವೆನೆಝುವೆಲಾದ ಮೇಲೆ ಅಮೆರಿಕವು ವ್ಯಾಪಕ ನಿರ್ಬಂಧಗಳನ್ನು ಹೇರಿದ್ದರಿಂದ ಆ ದೇಶದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ಕಷ್ಟವಾಗಿತ್ತು ಹಾಗೂ ಸಾಗಣೆಯ ದೃಷ್ಟಿಯಿಂದಲೂ ಲಾಭದಾಯಕವಾಗಿರಲಿಲ್ಲ. ಹೀಗಾಗಿ ಭಾರತೀಯ ತೈಲ ಸಂಸ್ಕರಣಾ ಕಂಪೆನಿಗಳು ಅಲ್ಲಿನ ಮಾರುಕಟ್ಟೆಯಿಂದ ನಿರ್ಗಮಿಸಿದ್ದವು.

ಭಾರತದ ಸಾಗರೋತ್ತರ ತೈಲ ವ್ಯಾಪಾರಗಳ ಸಂಸ್ಥೆಯಾದ ‘ಓಎನ್‌ಜಿಸಿ ವಿದೇಶ್ ಲಿಮಿಟೆಡ್’ (ಓವಿಎಲ್) ಹಾಗೂ ವೆನೆಝುವೆಲಾ ಸರಕಾರವು, ಪೂರ್ವ ವೆನೆಝುವೆಲಾದ ಸ್ಯಾನ್ ಕ್ರಿಸ್ಟೊಬಾಲ್‌ನಲ್ಲಿರುವ ತೈಲಬಾವಿಯನ್ನು ಜಂಟಿಯಾಗಿ ನಿರ್ವಹಿಸುತ್ತಿದೆ. ಆದಾಗ್ಯೂ ಕಚ್ಚಾ ತೈಲ ಉತ್ಖನನಕ್ಕೆ ಬೇಕಾದ ಪ್ರಮುಖ ಸಲಕರಣೆಗಳು, ತಂತ್ರಜ್ಞಾನ ಇತ್ಯಾದಿಗಳಿಗೆ ಅಮೆರಿಕ ನಿರ್ಬಂಧ ವಿಧಿಸಿದ ಬಳಿಕ ಅಲ್ಲಿಂದ ತೈಲ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿತ್ತು. ಹೀಗಾಗಿ ಭಾರೀ ಪ್ರಮಾಣದ ತೈಲ ನಿಕ್ಷೇಪಗಳು ಬಳಕೆಯಾಗದೆ ಉಳಿದಿದ್ದವು.

ಅಲ್ಲದೆ, ಮಡುರೊ ಆಡಳಿತದಲ್ಲಿ ವೆನೆಝುವೆಲಾ ಸರಕಾರವು ಓವಿಎಲ್‌ಗೆ ನೀಡಬೇಕಿದ್ದ ಡಿವಿಡೆಂಡ್ ಪಾವತಿಗಳನ್ನು ಕೂಡ ಬಾಕಿಯಿರಿಸಿತ್ತು. 2014ರವರೆಗೆ ಸ್ಯಾನ್ ಕ್ರಿಸ್ಟೊಬಾಲ್ ತೈಲಬಾವಿ ಪ್ರದೇಶದಲ್ಲಿ ಓವಿಎಲ್‌ನ ಶೇ.40ರಷ್ಟು ಪಾಲುದಾರಿಕೆಗೆ ನೀಡಬೇಕಾಗಿದ್ದ 536 ಮಿಲಿಯನ್ ಡಾಲರ್‌ಗಳನ್ನು ಕೂಡ ಬಾಕಿಯಿರಿಸಿದೆ.

ಆನಂತರದ ವರ್ಷಗಳಲ್ಲಿಯೂ ಇದೇ ಮೊತ್ತವನ್ನು ಅಮೆರಿಕ ಬಾಕಿಯಿರಿಸಿತ್ತು. ಆದರೆ ಆ ಅವಧಿಯಲ್ಲಿ ವೆನೆಝುವೆಲಾವು ಲೆಕ್ಕಪತ್ರ ಪರಿಶೋಧನೆಗೆ ಅನುಮತಿ ನೀಡದೆ ಇದ್ದುದರಿಂದ ಬಾಕಿಹಣ ಪಾವತಿ ನೆನೆಗುದಿಯಲ್ಲೇ ಉಳಿದಿತ್ತು.

ಅಮೆರಿಕ ಶನಿವಾರ ಹಠಾತ್ತನೇ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ನಿಕೋಲಾಸ್ ಮಡುರೊ ಅವರನ್ನು ಪದಚ್ಯುತಿಗೊಳಿಸಿ ಬಂಧಿಸಿದೆ ಹಾಗೂ ವೆನೆಝುವೆಲಾದಲ್ಲಿರುವ ಅಪಾರ ತೈಲ ಸಂಪನ್ಮೂಲಗಳನ್ನು ಅಮೆರಿಕ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News