×
Ad

ಅಮೆರಿಕ: ಭಾರತೀಯ ಮಹಿಳೆಯ ಶವ ಮಾಜಿ ಪ್ರಿಯಕರನ ಫ್ಲ್ಯಾಟ್‌ನಲ್ಲಿ ಪತ್ತೆ!

Update: 2026-01-05 07:50 IST

PC: x.com/IndianExpress

ಲಾಸ್‌ವೇಗಸ್: ಸುಮಾರು 27 ವರ್ಷ ವಯಸ್ಸಿನ ಭಾರತೀಯ ಮಹಿಳೆಯ ಶವ ಹೊಸವರ್ಷದ ಮುನ್ನಾದಿನ ಆಕೆಯ ಮಾಜಿ ಪ್ರಿಯಕರನ ಮೆರಿಲ್ಯಾಂಡ್ ಅಪಾರ್ಟ್ಮೆಂಟ್ ನಲ್ಲಿ ಇರಿತದ ಗಾಯದೊಂದಿಗೆ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಮಹಿಳೆಯನ್ನು ನಿಕಿತಾ ಗೊಡಿಶಾಲಾ ಎಂದು ಗುರುತಿಸಲಾಗಿದ್ದು, ಈಕೆ ಎಲಿಕಾಟ್ ಸಿಟಿಯಲ್ಲಿ ಡಾಟಾ ಮತ್ತು ಕಾರ್ಯತಂತ್ರ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹಾವರ್ಡ್ ಕೌಂಟಿ ಪೊಲೀಸರು ಹೇಳಿದ್ದಾರೆ. ಮಹಿಳೆಯ ಮಾಜಿ ಪ್ರಿಯಕರ ಅರ್ಜುನ್ ಶರ್ಮಾ (26) ಎಂಬಾತನ ಅಪಾರ್ಟ್ಮೆಂಟ್ ನಲ್ಲಿ ಶವ ಪತ್ತೆಯಾಗಿದೆ.

ಮಾಜಿ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಡಿ. 31ರಂದು ಗೊಡಿಶಾಲಾ ಜತೆ ಮೆರಿಲ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ಅರ್ಜುನ್ ಕೊನೆಯ ಬಾರಿ ಕಾಣಿಸಿಕೊಂಡಿದ್ದು, ಜ.2ರಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಜ.2ರಂದು ಗೋಡಿಶಾಲ ನಾಪತ್ತೆಯಾದ ಬಗ್ಗೆ ಶರ್ಮಾ ಪೊಲೀಸ್‌ರಿಗೆ ದೂರು ನೀಡಿದ್ದು, ಡಿ.31ರಂದು ಮೇರಿಲ್ಯಾಂಡ್ ನಗರದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆಕೆಯನ್ನು ಕೊನೆಯದಾಗಿ ಕಂಡಿದ್ದೇನೆ ಎಂದು ತಿಳಿಸಿದ್ದಾನೆ.

ಜ.3ರಂದು ತನಿಖಾಧಿಕಾರಿಗಳು ಶೋಧ ನಡೆಸಿದಾಗ ಅಪಾರ್ಟ್ಮೆಂಟ್ ನಲ್ಲಿ ಗೊಡಿಶಾಲಾ ಮೃತದೇಹ ಪತ್ತೆಯಾಗಿದ್ದು, ಇರಿತದ ಗಾಯಗಳಿದ್ದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಗೊಡಿಶಾಲಾ ನಾಪತ್ತೆಯಾದ ಬಗ್ಗೆ ವರದಿಯಾದ ದಿನವೇ ಆರೋಪಿ ಭಾರತಕ್ಕೆ ಪಲಾಯನ ಮಾಡಿದ್ದಾನೆ. ಡಿ.31ರ ರಾತ್ರಿ 7 ಗಂಟೆಯ ಸುಮಾರಿಗೆ ಆರೋಪಿ ಕೊಲೆ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಹತ್ಯೆಯ ಕಾರಣ ತಿಳಿದುಬಂದಿಲ್ಲ. ನಿಕಿತಾ ಕುಟುಂಬದ ಜತೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು, ಎಲ್ಲ ಅಗತ್ಯ ಸಹಾಯ ನೀಡಲಾಗುವುದು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News