ನಿಮಗೂ ಬಿಸಿ ಮುಟ್ಟಿಸುತ್ತೇವೆ: ಕೊಲಂಬಿಯಾ ಅಧ್ಯಕ್ಷರಿಗೆ ಟ್ರಂಪ್ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಜ.4: ವೆನೆಝುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋಗೆ ಎಚ್ಚರಿಕೆ ಸಂದೇಶ ರವಾನಿಸಿರುವುದು ಲ್ಯಾಟಿನ್ ಅಮೆರಿಕಾದ್ಯಂತ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
‘ಅವರು ಕೊಕೈನ್ ತಯಾರಿಸಿ ಅಮೆರಿಕಾಕ್ಕೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಅವರು ನಮ್ಮ ಗುರಿಯಾಗಬಹುದು’ ಎಂದು ಪೆಟ್ರೋ ಅವರನ್ನು ಉಲ್ಲೇಖಿಸಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ. ಶನಿವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಅಮೆರಿಕದ ಪಡೆ ವೆನೆಝುವೆಲಾದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಾಸ್ ಮಡುರೊ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದಿದೆ.
ಅಮೆರಿಕದ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕಾದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದ್ದು ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಪೆಟ್ರೋ ತೀವ್ರವಾಗಿ ಖಂಡಿಸಿದ್ದರು. ‘ಅಮೆರಿಕದ ಕಾರ್ಯಾಚರಣೆಯ ಬೆನ್ನಲ್ಲೇ ಸರಕಾರ ರಾಷ್ಟ್ರೀಯ ಭದ್ರತಾ ಸಭೆಯನ್ನು ನಡೆಸಿದ್ದು, ವೆನೆಝುವೆಲಾದಿಂದ ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರು ದೇಶದೊಳಗೆ ನುಗ್ಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಲಂಬಿಯಾ–ವೆನೆಝುವೆಲಾ ಗಡಿಯುದ್ದಕ್ಕೂ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂತರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ ಪೆಟ್ರೋ, ವೆನೆಝುವೆಲಾ ಹಾಗೂ ಈ ಪ್ರದೇಶದ ಮೇಲಿನ ಆಕ್ರಮಣವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.