Venezuela | ಬಂಧನದ ಬಳಿಕ ‘ಹ್ಯಾಪಿ ನ್ಯೂ ಇಯರ್’ ಎಂದ ಮಡುರೊ!
ನಿಕೊಲಸ್ ಮಡುರೊ | Photo Credit : PTI
ವಾಷಿಂಗ್ಟನ್, ಜ.4: ಶನಿವಾರ ಮುಂಜಾನೆ ವೆನೆಝುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕದ ಸೇನೆ ವೆನೆಝುವೆಲಾದ ರಾಜಧಾನಿಯಲ್ಲಿ ಸೆರೆಹಿಡಿದ ಬಳಿಕ ನಡೆದ ಕೆಲವು ವಿದ್ಯಮಾನಗಳು:
ಮಡುರೊ ಮತ್ತು ಅವರ ಪತ್ನಿ ಮಲಗಿದ್ದಾಗಲೇ ಅಮೆರಿಕದ ಕಾರ್ಯಾಚರಣೆ ನಡೆದಿದೆ. ಮಡುರೊ ಹಾಗೂ ಪತ್ನಿಯನ್ನು ಬೆಡ್‌ರೂಂನಿಂದ ಹೊರಗೆ ಎಳೆದು ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಯಾರ್ಕ್‌ನ ಸ್ಟಿವರ್ಟ್ ‘ಏರ್ ನ್ಯಾಷನಲ್ ಗಾರ್ಡ್’ ಸೇನಾನೆಲೆಯಲ್ಲಿ ವಿಮಾನದಿಂದ ಮಡುರೊ ಕೆಳಗಿಳಿಯುತ್ತಿರುವುದು ಮತ್ತು ಹತ್ತಕ್ಕೂ ಹೆಚ್ಚು ಫೆಡರಲ್ ಭದ್ರತಾ ಸಿಬ್ಬಂದಿ ಅವರನ್ನು ಕರೆದೊಯ್ಯುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಅಲ್ಲಿಂದ ಮ್ಯಾನ್‌ಹ್ಯಾಟನ್ ಗೆ ಹೆಲಿಕಾಪ್ಟರ್ ಮೂಲಕ ಕರೆದೊಯ್ದು, ನಂತರ ಮತ್ತೊಂದು ಹೆಲಿಕಾಪ್ಟರ್ ನಲ್ಲಿ ಬ್ರೂಕ್ಲಿನ್ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕೆಲ ಹೊತ್ತಿನ ಬಳಿಕ, ಪೊಲೀಸರ ಪೆರೇಡ್ ನಲ್ಲಿ ಮಡುರೊ ನಡೆದುಕೊಂಡು ಹೋಗುತ್ತಿರುವ ವೀಡಿಯೊವನ್ನು ಶ್ವೇತಭವನ ಪೋಸ್ಟ್ ಮಾಡಿದೆ. ಕೋಣೆಯಲ್ಲಿದ್ದವರಿಗೆ ಮಡುರೊ ‘ಗುಡ್ ನೈಟ್’ ಮತ್ತು ‘ಹ್ಯಾಪಿ ನ್ಯೂ ಇಯರ್’ ಎಂದು ಹೇಳುತ್ತಿರುವುದನ್ನೂ ವೀಡಿಯೊ ತೋರಿಸಿದೆ.