×
Ad

ಸರ್, ದಯವಿಟ್ಟು ನಿಮ್ಮನ್ನು ಭೇಟಿಯಾಗಬಹುದೇ?’ ಎಂದು ಮೋದಿ ಕೇಳಿದ್ದರು: ಟ್ರಂಪ್ ಹೇಳಿಕೆ

Update: 2026-01-07 22:18 IST

ಡೊನಾಲ್ಡ್ ಟ್ರಂಪ್ , ನರೇಂದ್ರ ಮೋದಿ | Photo Credit : AP \ PTI 

ವಾಷಿಂಗ್ಟನ್: ಅಪಾಚೆ ಹೆಲಿಕಾಪ್ಟರ್‌ಗಳ ವಿತರಣೆಯಲ್ಲಿನ ವಿಳಂಬ ಸೇರಿದಂತೆ ಭಾರತದ ಬಾಕಿ ಇರುವ ರಕ್ಷಣಾ ಖರೀದಿಗಳು ಹಾಗೂ ವ್ಯಾಪಾರ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸಿ ‘ಸರ್’ ಎಂದು ಕರೆದಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಹೌಸ್ GOP ಸದಸ್ಯರ ರಿಟ್ರೀಟ್‌ನಲ್ಲಿ ಮಾತನಾಡಿದ ಟ್ರಂಪ್, “ಭಾರತ ಅಪಾಚೆ ಹೆಲಿಕಾಪ್ಟರ್‌ಗಳನ್ನು ಆರ್ಡರ್ ಮಾಡಿತ್ತು. ಆದರೆ ಐದು ವರ್ಷಗಳಾದರೂ ಅವು ವಿತರಣೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನನ್ನನ್ನು ಭೇಟಿಯಾಗಲು ಬಂದರು. ‘ಸರ್, ದಯವಿಟ್ಟು ನಿಮ್ಮನ್ನು ಭೇಟಿಯಾಗಬಹುದೇ?’ ಎಂದು ಕೇಳಿದರು,” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯೊಂದಿಗೆ ಉತ್ತಮ ಸಂಬಂಧವಿದೆ ಎಂದೂ ಅವರು ಹೇಳಿದರು.

ಆದರೆ ಸುಂಕಗಳ ವಿಚಾರದಲ್ಲಿ ಪ್ರಧಾನಿ ಮೋದಿ ತಮ್ಮ ಬಗ್ಗೆ ಅತೃಪ್ತರಾಗಿದ್ದಾರೆ ಎಂದು ಟ್ರಂಪ್ ಹೇಳಿದರು. “ಭಾರತ ಈಗ ಬಹಳಷ್ಟು ಸುಂಕಗಳನ್ನು ಪಾವತಿಸುತ್ತಿದೆ. ರಷ್ಯಾದ ತೈಲ ಖರೀದಿ ವಿಷಯವೇ ಇದಕ್ಕೆ ಕಾರಣ,” ಎಂದು ಅವರು ಹೇಳಿದರು. ಇದೇ ವೇಳೆ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದೂ ಟ್ರಂಪ್ ತಿಳಿಸಿದರು.

ಸುಂಕಗಳ ಪರಿಣಾಮವನ್ನು ಉಲ್ಲೇಖಿಸಿದ ಅವರು, “ಸುಂಕಗಳಿಂದಾಗಿ ಅಮೆರಿಕಕ್ಕೆ ಲಾಭವಾಗುತ್ತಿದೆ. ನಮ್ಮ ದೇಶಕ್ಕೆ 650 ಶತಕೋಟಿ ಡಾಲರ್‌ ಗಳಿಗಿಂತ ಹೆಚ್ಚಿನ ಆದಾಯ ಈಗಾಗಲೇ ಅಥವಾ ಶೀಘ್ರದಲ್ಲೇ ಹರಿದುಬರಲಿದೆ,” ಎಂದು ಹೇಳಿದರು.

ಅಪಾಚೆ ಹೆಲಿಕಾಪ್ಟರ್ ಒಪ್ಪಂದ:

ರಕ್ಷಣಾ ಸಹಕಾರದ ಕುರಿತು ಮಾತನಾಡಿದ ಟ್ರಂಪ್, ಭಾರತವು ವರ್ಷಗಳಿಂದ ಅಪಾಚೆ ಹೆಲಿಕಾಪ್ಟರ್‌ ಗಳಿಗಾಗಿ ಕಾಯುತ್ತಿದೆ ಎಂದು ಹೇಳಿದರು. “ಈ ಪರಿಸ್ಥಿತಿಯನ್ನು ನಾವು ಬದಲಾಯಿಸುತ್ತಿದ್ದೇವೆ. ಭಾರತ 68 ಅಪಾಚೆ ಹೆಲಿಕಾಪ್ಟರ್‌ಗಳಿಗೆ ಆರ್ಡರ್ ನೀಡಿದೆ ,” ಎಂದು ಅವರು ಹೆಚ್ಚಿನ ವಿವರ ನೀಡದೇ ಹೇಳಿದರು.

ಹೆಚ್ಚುವರಿ ಸುಂಕಗಳ ಎಚ್ಚರಿಕೆ:

ಈ ವಾರದ ಆರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ರಷ್ಯಾದ ತೈಲ ಖರೀದಿ ವಿಷಯದಲ್ಲಿ ಸಹಕಾರ ಸಿಗದಿದ್ದರೆ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಆಯ್ಕೆಯೂ ಇದೆ ಎಂದು ಪುನರುಚ್ಚರಿಸಿದರು. “ಅಗತ್ಯವಿದ್ದರೆ ಭಾರತದ ಮೇಲೆ ಶೀಘ್ರದಲ್ಲೇ ಸುಂಕಗಳನ್ನು ಹೆಚ್ಚಿಸಬಹುದು,” ಎಂದು ಅವರು ಹೇಳಿದ್ದರು.

ಪ್ರಸ್ತುತ ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಿದ್ದು, ಇದರಲ್ಲಿ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ಶೇಕಡಾ 25 ರಷ್ಟು ಸುಂಕವೂ ಸೇರಿದೆ. ಮಸ್ಕೋದೊಂದಿಗೆ ಇಂಧನ ವ್ಯಾಪಾರ ನಡೆಸುವ ದೇಶಗಳ ಮೇಲೆ ಒತ್ತಡ ತರುವ ಅಮೆರಿಕದ ವ್ಯಾಪಕ ನೀತಿಯ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News