ಅಮೆರಿಕ ದಾಳಿಯಲ್ಲಿ ಇರಾನ್‌ನ 42 ನೌಕಾಪಡೆ ಹಡಗುಗಳ ಧ್ವಂಸ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಮಾ.7: ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಸೇನಾ ಸಾಮರ್ಥ್ಯಕ್ಕೆ ಗಣನೀಯ ಹಾನಿಯಾಗಿದ್ದು, ಈ ದಾಳಿಯಿಂದ ಇರಾನ್‌ನ ನೌಕಾಪಡೆ, ವಾಯುಪಡೆ ಮತ್ತು ಸಂವಹನ ಮೂಲಭೂತ ಸೌಕರ್ಯಗಳು ತೀವ್ರವಾಗಿ ಹಾನಿಗೀಡಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇತ್ತೀಚಿನ ದಿನಗಳಲ್ಲಿ ಅಮೆರಿಕ ಸೇನಾಪಡೆಯು ಇರಾನ್‌ನ 42 ಯುದ್ಧನೌಕೆಗಳನ್ನು ಧ್ವಂಸಗೊಳಿಸಿದೆ ಹಾಗೂ ಇರಾನ್‌ನ ಬಹುತೇಕ ವಾಯುಪಡೆ ಶಕ್ತಿ ಮತ್ತು ದೂರಸಂಪರ್ಕ ವ್ಯವಸ್ಥೆಗಳನ್ನು ನಾಶಗೊಳಿಸಿದೆ ಎಂದು ತಿಳಿಸಿದ್ದಾರೆ.
ಇರಾನ್‌ನ ಪರಮಾಣು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸೌಕರ್ಯಗಳ ಮೇಲೆ ಈ ಹಿಂದೆ ಅಮೆರಿಕ ದಾಳಿ ನಡೆಸಿತ್ತು. ಈ ದಾಳಿಗಳು ನಡೆಯುವುದಕ್ಕೂ ಮುನ್ನ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವ ಹಂತಕ್ಕೆ ಸಮೀಪಿಸಿತ್ತು ಎಂದು ಅವರು ಹೇಳಿದ್ದಾರೆ.
ಈ ಕಾರ್ಯಾಚರಣೆ ಮಹತ್ವದ ಯಶಸ್ಸಾಗಿದ್ದು, ಇರಾನ್‌ನ ಸೇನಾ ಸಾಮರ್ಥ್ಯಗಳಿಗೆ ಈ ದಾಳಿಗಳು ನಿರ್ಣಾಯಕ ಹೊಡೆತ ನೀಡಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.