ಮಧ್ಯಪ್ರಾಚ್ಯವನ್ನು ಯುದ್ಧಕ್ಕೆಳೆಯುವ ಅಧಿಕಾರ ನಿಮಗೆ ನೀಡಿದವರು ಯಾರು?: ಟ್ರಂಪ್ ವಿರುದ್ಧ ದುಬೈ ಉದ್ಯಮಿ ಖಲಾಫ್ ಅಲ್ ಹಬ್ತೂರ್ ಆಕ್ರೋಶ
ಡೊನಾಲ್ಡ್ ಟ್ರಂಪ್(AP , PTI ) , ಖಲಾಫ್ ಅಹ್ಮದ್ ಅಲ್ ಹಬ್ತೂರ್(X \ @KhalafAlHabtoor)
ದುಬೈ, ಮಾ.7: ಇರಾನ್ ನೊಂದಿಗೆ ನಡೆಯುತ್ತಿರುವ ಮಿಲಿಟರಿ ಸಂಘರ್ಷಕ್ಕೆ ಗಲ್ಫ್ ಹಾಗೂ ಮಧ್ಯಪ್ರಾಚ್ಯ ಪ್ರದೇಶವನ್ನು ಎಳೆಯುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಯುಎಇ ಮೂಲದ ಕೋಟ್ಯಧಿಪತಿ ಉದ್ಯಮಿ ಖಲಾಫ್ ಅಹ್ಮದ್ ಅಲ್ ಹಬ್ತೂರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಪ್ರದೇಶವನ್ನು ಯುದ್ಧಭೂಮಿಯನ್ನಾಗಿ ಮಾಡಲು ನಿಮಗೆ ಅಧಿಕಾರ ನೀಡಿದವರು ಯಾರು?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಅಲ್ ಹಬ್ತೂರ್ ಗ್ರೂಪ್‌ನ ಸಂಸ್ಥಾಪಕರಾದ ಖಲಾಫ್ ಅಲ್ ಹಬ್ತೂರ್ ಗುರುವಾರ ಅಮೆರಿಕ ಅಧ್ಯಕ್ಷರಿಗೆ ಮುಕ್ತ ಪತ್ರ ಬರೆದು, ಅದನ್ನು ಅರೇಬಿಕ್ ಭಾಷೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಈ ಯುದ್ಧಕ್ಕೆ ಹೋಗುವ ನಿರ್ಧಾರ ಟ್ರಂಪ್ ಅವರ ಸ್ವಂತದ್ದೇ ಅಥವಾ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಭಾವದಿಂದ ಆಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಶನಿವಾರ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ದಾಳಿ ನಡೆಸಿ ದೇಶದ ನಾಯಕತ್ವ ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ದಾಳಿಯ ನಂತರ ಇರಾನ್ ಯುಎಇ ಸೇರಿದಂತೆ ಗಲ್ಫ್ ಪ್ರದೇಶದ ಕೆಲವು ರಾಷ್ಟ್ರಗಳತ್ತ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿತು.
ಈ ಹಿನ್ನೆಲೆದಲ್ಲಿ ಯುಎಇ ಹಾಗೂ ಅದರ ನೆರೆಯ ರಾಷ್ಟ್ರಗಳು ಸಂಘರ್ಷವನ್ನು ತಕ್ಷಣ ಕೊನೆಗೊಳಿಸಿ ಶಾಂತಿ ಮಾತುಕತೆ ಆರಂಭಿಸಲು ಉಭಯ ಪಕ್ಷಗಳಿಗೆ ಕರೆ ನೀಡಿವೆ. “ನೀವು ಗಲ್ಫ್ ಸಹಕಾರ ಮಂಡಳಿ ಮತ್ತು ಅರಬ್ ರಾಷ್ಟ್ರಗಳನ್ನು ಅವರು ಆಯ್ಕೆ ಮಾಡದ ಅಪಾಯದ ಕೇಂದ್ರದಲ್ಲಿ ನಿಲ್ಲಿಸಿದ್ದೀರಿ. ದೇವರಿಗೆ ಧನ್ಯವಾದಗಳು, ನಾವು ಬಲಿಷ್ಠರಾಗಿದ್ದು ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ. ನಮ್ಮ ತಾಯ್ನಾಡುಗಳನ್ನು ರಕ್ಷಿಸುವ ಸೈನ್ಯ ಹಾಗೂ ರಕ್ಷಣಾ ಪಡೆಗಳು ನಮ್ಮಲ್ಲಿವೆ. ಆದರೆ ಪ್ರಶ್ನೆ ಇನ್ನೂ ಉಳಿದಿದೆ: ನಮ್ಮ ಪ್ರದೇಶವನ್ನು ಯುದ್ಧಭೂಮಿಯನ್ನಾಗಿ ಮಾಡಲು ನಿಮಗೆ ಯಾರು ಅನುಮತಿ ನೀಡಿದರು?” ಎಂದು ಅಲ್ ಹಬ್ತೂರ್ ಪ್ರಶ್ನಿಸಿದ್ದಾರೆ.
ಇರಾನ್ ವಿರುದ್ಧ ಯುದ್ಧ ಮಾಡುವ ಅಮೆರಿಕದ ನಿರ್ಧಾರವು ಈ ಪ್ರದೇಶದ ಜನರ ಜೊತೆಗೆ ಅಮೆರಿಕದ ಜನರಿಗೂ ಆತಂಕ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ. “ಅಮೆರಿಕದ ಜನರಿಗೆ ಶಾಂತಿ ಮತ್ತು ಸಮೃದ್ಧಿಯ ಭರವಸೆ ನೀಡಲಾಗಿತ್ತು. ಆದರೆ ಈಗ ಅವರು ತಮ್ಮ ಹಣ ಮತ್ತು ತೆರಿಗೆಗಳಿಂದ ನಿಧಿ ಸಂಗ್ರಹಗೊಂಡ ಯುದ್ಧದಲ್ಲಿ ತಾವು ಸಿಲುಕಿಕೊಂಡಿದ್ದಾರೆ,” ಎಂದು ಅವರು ಟೀಕಿಸಿದ್ದಾರೆ.
ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ ವರದಿ ಪ್ರಕಾರ, ಈ ಯುದ್ಧದ ನೇರ ಮಿಲಿಟರಿ ಕಾರ್ಯಾಚರಣೆಗಳಿಗೆ 40ರಿಂದ 65 ಶತಕೋಟಿ ಡಾಲರ್ ವೆಚ್ಚವಾಗಬಹುದು. ಸಂಘರ್ಷ ನಾಲ್ಕು ಅಥವಾ ಐದು ವಾರಗಳವರೆಗೆ ಮುಂದುವರಿದರೆ ಆರ್ಥಿಕ ಪರಿಣಾಮಗಳು ಹಾಗೂ ಪರೋಕ್ಷ ನಷ್ಟಗಳನ್ನು ಸೇರಿಸಿ ಸುಮಾರು 210 ಶತಕೋಟಿ ಡಾಲರ್ ತನಕ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಯುದ್ಧಗಳಲ್ಲಿ ಭಾಗಿಯಾಗುವುದಿಲ್ಲ ಎಂಬ ತಮ್ಮ ಭರವಸೆಯನ್ನು ಟ್ರಂಪ್ ಮುರಿದಿದ್ದಾರೆ ಎಂದು ಅಲ್ ಹಬ್ತೂರ್ ಆರೋಪಿಸಿದ್ದಾರೆ. “ನಿಮ್ಮ ಎರಡನೇ ಅವಧಿಯಲ್ಲಿ ಸೊಮಾಲಿಯಾ, ಇರಾಕ್, ಯೆಮೆನ್, ನೈಜೀರಿಯಾ, ಸಿರಿಯಾ, ಇರಾನ್ ಮತ್ತು ವೆನೆಝುವೆಲಾ ಸೇರಿ ಏಳು ದೇಶಗಳಲ್ಲಿ ವಿದೇಶಿ ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡಿದ್ದೀರಿ. ಕೆರಿಬಿಯನ್ ಹಾಗೂ ಪೂರ್ವ ಪೆಸಿಫಿಕ್ ಮಹಾಸಾಗರ ಪ್ರದೇಶಗಳಲ್ಲಿಯೂ ನೌಕಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ 658ಕ್ಕೂ ಹೆಚ್ಚು ವಿದೇಶಿ ವೈಮಾನಿಕ ದಾಳಿಗಳನ್ನು ನಿರ್ದೇಶಿಸಿದ್ದೀರಿ,” ಎಂದು ಅವರು ಹೇಳಿದ್ದಾರೆ.
ಈ ಕ್ರಮಗಳ ಪರಿಣಾಮವಾಗಿ ಕೇವಲ 400 ದಿನಗಳಲ್ಲೇ ಅಮೆರಿಕ ಅಧ್ಯಕ್ಷರ ಅನುಮೋದನೆ ಪ್ರಮಾಣವು ಸುಮಾರು ಒಂಭತ್ತು ಶೇಕಡಾ ಇಳಿಕೆಯಾಗಿದೆ ಎಂದು ಅಲ್ ಹಬ್ತೂರ್ ಹೇಳಿದ್ದಾರೆ. ಅಮೆರಿಕದೊಳಗೇ ಹೊಸ ಯುದ್ಧಕ್ಕೆ ಎಳೆಯಲ್ಪಡುವ ಬಗ್ಗೆ ಆತಂಕ ಹೆಚ್ಚುತ್ತಿದೆ. ಇದರಿಂದ ಅಮೆರಿಕನ್ನರ ಜೀವಿತ, ಅವರ ಆರ್ಥಿಕತೆ ಮತ್ತು ಭವಿಷ್ಯ ಅನಗತ್ಯ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಸಂದೇಶದಲ್ಲಿ, ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದ ಗಲ್ಫ್ ಹಾಗೂ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಹಾನಿಗೆ ಯಾರು ಹೊಣೆಗಾರರು ಎಂದು ಅವರು ಪ್ರಶ್ನಿಸಿದ್ದಾರೆ. “ನಮ್ಮ ಯಾವುದೇ ಪಾತ್ರವಿಲ್ಲದ ಈ ಸಂಘರ್ಷದಿಂದ ಉಂಟಾದ ಉದ್ವಿಗ್ನತೆಗೆ ಯಾರು ಬೆಲೆ ಕಟ್ಟುತ್ತಾರೆ? ನಮ್ಮ ಆರ್ಥಿಕತೆಗಳು, ನಮ್ಮ ಭದ್ರತೆ ಮತ್ತು ನಮ್ಮ ಜನರ ಸ್ಥಿರತೆ ಮಹಾಶಕ್ತಿಗಳ ನಡುವೆ ಅಂಕಗಳನ್ನು ಇತ್ಯರ್ಥಪಡಿಸುವ ವೇದಿಕೆಗಳಲ್ಲ,” ಎಂದು ಅವರು ಹೇಳಿದ್ದಾರೆ.
“ನಾವು ಸ್ಥಿರತೆ ಮತ್ತು ಶಾಂತಿಯ ಪರವಾಗಿದ್ದೇವೆ. ಈ ಸಂಘರ್ಷದ ಭಾಗವಾಗಲು ನಾವು ಆಯ್ಕೆ ಮಾಡಿಲ್ಲ. ಆದರೆ ನಾವು ಸೃಷ್ಟಿಸದ ಉದ್ವಿಗ್ನತೆಗೆ ಬೆಲೆ ಕಟ್ಟುವ ಪರಿಸ್ಥಿತಿ ಎದುರಾಗಿದೆ. ಇತರರ ಸಂಘರ್ಷದಿಂದ ಪ್ರದೇಶದ ದೇಶಗಳು ಮತ್ತು ಜನರು ಅನುಭವಿಸಿದ ನಷ್ಟಗಳಿಗೆ ಯಾರು ಜವಾಬ್ದಾರರು, ಯಾರು ಪರಿಹಾರ ನೀಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಬೇಕು,” ಎಂದು ಅಲ್ ಹಬ್ತೂರ್ ಹೇಳಿದ್ದಾರೆ.
“ಈ ಪ್ರದೇಶಕ್ಕೆ ಶಾಂತ ಮನಸ್ಸಿನ ಅಗತ್ಯವಿದೆ; ಯುದ್ಧದ ಜ್ವಾಲೆಗಳನ್ನು ಇನ್ನಷ್ಟು ಹೆಚ್ಚಿಸುವ ಪ್ರತಿಕ್ರಿಯೆಗಳ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.