×
Ad

ಈಕ್ವೆಡಾರ್ : ಗ್ರೆನೇಡ್ ಗಳೊಂದಿಗೆ ಟಿವಿ ಸ್ಟುಡಿಯೊಗೆ ನುಗ್ಗಿ ಲೈವ್ ನಲ್ಲೇ ʼಯುದ್ಧʼ ಘೋಷಿಸಿದ ಬಂದೂಕುಧಾರಿಗಳು!

Update: 2024-01-10 09:20 IST

Photo: twitter

ಕ್ವಿಟೊ: ಲೈವ್ ಕಾರ್ಯಕ್ರಮ ನಡೆಯುತ್ತಿರುವಾಗಲೇ ಟೆಲಿವಿಷನ್ ಸ್ಟುಡಿಯೊಗೆ ಗ್ರೆನೇಡ್ ಗಳೊಂದಿಗೆ ನುಗ್ಗಿದ ಬಂದೂಕುಧಾರಿಗಳು ಯುದ್ಧ ಘೋಷಿಸಿ, ಎಲ್ಲ ಭದ್ರತಾ ಪಡೆಗಳು ಹಾಗೂ ನಾಗರಿಕರನ್ನು ಹತ್ಯೆ ಮಾಡುವ ಬೆದರಿಕೆ ಹಾಕಿರುವ ಘಟನೆ ಈಕ್ವೆಡಾರ್ ನಲ್ಲಿ ನಡೆದಿದೆ ಎಂದು ndtv ವರದಿ ಮಾಡಿದೆ.

ಈ ಘಟನೆಯ ಬಳಿಕ ದೇಶದ ಅತ್ಯಂತ ಪ್ರಭಾವಿ ಅಪರಾಧಿ ಗುಂಪಿನ ವಿರುದ್ಧ ಸೇನಾ ಕಾರ್ಯಾಚರಣೆಗೆ ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಆದೇಶ ನೀಡಿದ್ದಾರೆ. ಬಂಧೂಕುಧಾರಿಗಳೂ "ಯುದ್ಧ" ಘೋಷಣೆ ಮಾಡಿದ ಬೆನ್ನಲ್ಲೇ ನೊಬೊಡೊ ದೇಶದಲ್ಲಿ ಆಂತರಿಕ ಸಶಸ್ತ್ರ ಸಂಘರ್ಷ ಸ್ಥಿತಿಯನ್ನು ಘೋಷಿಸಿದ್ದಾರೆ. ಈಕ್ವೆಡಾರ್ ನ ಅತ್ಯಂತ ಪ್ರಬಲ ಅಪರಾಧಿ ಮುಖಂಡರು ಜೈಲಿನಿಂದ ತಪ್ಪಿಸಿಕೊಂಡು ಸೃಷ್ಟಿಯಾಗಿರುವ ಭದ್ರತಾ ಬಿಕ್ಕಟ್ಟಿನ ಸ್ಥಿತಿ ಮತ್ತಷ್ಟು ಉಲ್ಬಣಿಸಿದೆ ಎಂದು ತಿಳಿದು ಬಂದಿದೆ.

ಕೊಲಂಬಿಯಾ ಮತ್ತು ಪೆರುವಿನ ಕೊಕೇನ್ ರಫ್ತುದಾರರ ನಡುವೆ ಸಿಲುಕಿಕೊಂಡಿರುವ ಶಾಂತ ಈಕ್ವೆಡಾರ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂಸೆ ಸ್ಫೋಟಗೊಂಡಿದೆ. "ಈ ಗುಂಪುಗಳನ್ನು ಮಟ್ಟಹಾಕಲು ಮಿಲಿಟರಿ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದೇನೆ" ಎಂದು ನೊಬೊವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ಬಂದರು ನಗರವದ ಗುಯಾಕ್ವಿನ್ ಟಿಸಿ ಟೆಲಿವಿಷನ್ ಸ್ಟುಡಿಯೊಗೆ ರೈಫಲ್ ಮತ್ತು ಗ್ರೆನೇಡ್ ಳೊಂದಿಗೆ ದಾಳಿಕೋರರು ನುಗ್ಗಿ ಯುದ್ಧ ಘೋಷಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ. ಬಂದೂಕಿನ ಸದ್ದು ಕೇಳಿದ ಮಹಿಳೆಯೊಬ್ಬರು, "ದಯವಿಟ್ಟು ಗುಂಡು ಹೊಡೆಯಬೇಡಿ" ಎಂದು ಅಂಗಲಾಚುತ್ತಿರುವುದು ಕೇಳಿಸುತ್ತಿದೆ.

ಸ್ಟುಡಿಯೊದ ದೀಪಗಳು ಆರುತ್ತಿರುವ ಸಂದರ್ಭದಲ್ಲಿ ನೋವಿನಿಂದ ವ್ಯಕ್ತಿಯೊಬ್ಬರು ಚೀರುತ್ತಿರುವುದು ಕೂಡಾ ಕೇಳಿಬಂದಿದೆ. ಆದರೆ ಟಿವಿ ನೇರಪ್ರಸಾರ ಮುಂದುವರಿದಿದೆ.

"ಅವರು ನಮ್ಮ ಹತ್ಯೆಗೆ ಬಂದಿದ್ದಾರೆ. ದೇವರೇ… ದಯವಿಟ್ಟು ಅದಕ್ಕೆ ಅವಕಾಶ ನೀಡಬೇಡ. ಕ್ರಿಮಿನಲ್ ಗಳು ನೇರಪ್ರಸಾರ ಮಾಡುತ್ತಿದ್ದಾರೆ" ಎಂದು ಟಿಸಿ ಉದ್ಯೋಗಿಯೊಬ್ಬರು ಎಎಫ್ ಪಿ ಗೆ ವಾಟ್ಸಪ್ ಸಂದೇಶ ನೀಡಿದ್ದಾರೆ. ಸುಮಾರು 30 ನಿಮಿಷಗಳ ಬಳಿಕ, ಸ್ಟುಡಿಯೊ ಪ್ರವೇಶಿಸಿದ ವ್ಯಕ್ತಿಯೊಬ್ಬ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಘೋಷಿಸಿದ್ದಾನೆ.

ಇದಕ್ಕೂ ಮುನ್ನ ಗ್ಯಾಂಗ್ ಸ್ಟರ್ ಗಳು ಪೊಲೀಸ್ ಅಧಿಕಾರಿಯನ್ನು ಅಪಹರಿಸಿ, ಹಲವು ನಗರಗಳಲ್ಲಿ ಸ್ಫೋಟಗಳನ್ನು ನಡೆಸಿದ್ದಾರೆ. ದೇಶದಲ್ಲಿ 60 ದಿನಗಳ ತುರ್ತುಪರಿಸ್ಥಿತಿ ಮತ್ತು ರಾತ್ರಿ ಕರ್ಫ್ಯೂ ವಿಧಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News