Egypt | ಭೀಕರ ಅಗ್ನಿ ದುರಂತ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 31 ಮಂದಿ ಮೃತ್ಯು; 21 ಜನರಿಗೆ ಗಾಯ
Photo credit : indiatoday
ಗಿಝಾ: ಈಜಿಪ್ಟ್ ನ ಗಿಝಾದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 21 ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಾರುಗಳು ಮತ್ತು ಬೈಕ್ ಗಳು ಸೇರಿದಂತೆ 27 ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ ಎಂದು India Today ವರದಿ ಮಾಡಿದೆ.
ನಗರದ ಅಲ್-ವಾರಾಕ್ ಜಿಲ್ಲೆಯ ಸುರಂಗದ ಮೇಲ್ಭಾಗದಲ್ಲಿರುವ ಗ್ರೇಟರ್ ಕೈರೋ ರಿಂಗ್ ರಸ್ತೆಯಲ್ಲಿ ಈ ಭೀಕರ ಅವಘಡ ಸಂಭವಿಸಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ವಾಹನಗಳಿಗೂ ವ್ಯಾಪಿಸಿದೆ.
ಸಾರ್ವಜನಿಕ ಅಭಿಯೋಜಕರ ಕಚೇರಿಯ ಪ್ರಾಥಮಿಕ ಅಂದಾಜಿನ ಪ್ರಕಾರ, ಕಾರುಗಳು ಮತ್ತು ಬೈಕ್ ಗಳು ಸೇರಿದಂತೆ 27 ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸಾವಿನ ಸಂಖ್ಯೆ ಹಾಗೂ ಹಾನಿಯ ಪ್ರಮಾಣ ನಿಖರವಾಗಿ ಇನ್ನಷ್ಟೇ ತಿಳಿದುಬರಬೇಕಿದೆ. ಮೃತರ ಗುರುತು ಪತ್ತೆಗಾಗಿ DNA ಮಾದರಿಗಳನ್ನು ಸಂಗ್ರಹಿಸುವಂತೆ ಸಾರ್ವಜನಿಕ ಅಭಿಯೋಜಕರು ಆದೇಶಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಸಲು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 39 ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿತ್ತು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಆಕಾಶದೆತ್ತರಕ್ಕೆ ಏರುತ್ತಿರುವುದು ಕಂಡುಬಂದಿದೆ. ಸುಟ್ಟು ಕರಕಲಾದ ಕಾರುಗಳು, ಮಿನಿ ಬಸ್ ಗಳು ಮತ್ತು ಬೈಕ್ ಗಳು, ಅಗ್ನಿಶಾಮಕ ವಾಹನಗಳು ಹಾಗೂ ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅವಶೇಷಗಳು ದುರಂತದ ತೀವ್ರತೆಯನ್ನು ಬಿಂಬಿಸಿವೆ.
ಘಟನೆಯನ್ನು ಕಣ್ಣಾರೆ ಕಂಡ ಅಲಿ ಯೂಸೆಫ್, ಬೆಂಕಿ ಹೊತ್ತಿಕೊಂಡಾಗ ಹಲವರು ತಮ್ಮ ವಾಹನಗಳೊಳಗೇ ಸಿಲುಕಿಕೊಂಡಿದ್ದರು ಎಂದು ತಿಳಿಸಿದ್ದಾರೆ.
"ಕಾರುಗಳು ಸುಟ್ಟು ಕರಕಲಾಗಿದ್ದವು. ಅವುಗಳೊಳಗೆ ಜನರು ಇದ್ದರು. ಅವರಿಗೆ ಹೊರಬರಲು ಸಮಯವೇ ಸಿಗಲಿಲ್ಲ. ಬೆಂಕಿಯ ಜ್ವಾಲೆಗಳು ವಾಹನಗಳನ್ನು ಹಾಗೂ ಅದರೊಳಗಿದ್ದ ಜನರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು" ಎಂದು ಅವರು ಹೇಳಿದ್ದಾರೆ.
ಗ್ರೇಟರ್ ಕೈರೋ ರಿಂಗ್ ರೋಡ್, ಕೈರೋ, ಗಿಝಾ ಮತ್ತು ಕಲ್ಯುಬಿಯಾ ಪ್ರಾಂತ್ಯಗಳನ್ನು ಸಂಪರ್ಕಿಸುವ ಪ್ರಮುಖ ಸಾರಿಗೆ ಮಾರ್ಗವಾಗಿದೆ. ಇದು ಗ್ರೇಟರ್ ಕೈರೋ ಪ್ರದೇಶದ ಪ್ರಮುಖ ಹೆದ್ದಾರಿಗಳನ್ನು ಜೊತೆಗೂಡಿಸುತ್ತವೆ.
ಈಜಿಪ್ಟ್ ನಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದ್ದು, ವಾಹನಗಳ ಅತಿಯಾದ ವೇಗ, ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದು ಮತ್ತು ರಸ್ತೆಗಳ ದುಸ್ಥಿತಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಈಜಿಪ್ಟ್ ನ ಸರ್ಕಾರಿ ಅಂಕಿಅಂಶ ಸಂಸ್ಥೆ CAPMAS ಪ್ರಕಾರ, ರಸ್ತೆ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ 2024ರಲ್ಲಿ 5,260 ಇತ್ತು. 2025ರಲ್ಲಿ ಈ ಸಂಖ್ಯೆ ಶೇ. 10.8ರಷ್ಟು ಹೆಚ್ಚಳವಾಗಿ 5,829ಕ್ಕೆ ತಲುಪಿದೆ.
ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಹೆದ್ದಾರಿಗಳು ಮತ್ತು ಸೇತುವೆಗಳನ್ನು ನಿರ್ಮಿಸುವ ಮೂಲಕ ತನ್ನ ರಸ್ತೆ ಜಾಲವನ್ನು ವಿಸ್ತರಿಸಿದೆ. ಜನಸಂಖ್ಯೆಯ ಬೆಳವಣಿಗೆ, ನಗರಗಳ ವಿಸ್ತರಣೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರಯತ್ನಗಳ ನಡುವೆಯೂ ರಸ್ತೆ ಸುರಕ್ಷತೆಯ ಕುರಿತ ಆತಂಕಗಳು ಮುಂದುವರಿದಿವೆ.