ಭಾರತಕ್ಕೆ ಹಾನಿಯುಂಟು ಮಾಡುವ ರಾಷ್ಟ್ರಗಳಿಗೆ ಯುರೋಪ್‌ನಿಂದ ಶಸ್ತ್ರಾಸ್ತ್ರ ಪೂರೈಕೆ: ಜೈಶಂಕರ್ ಆರೋಪ
ಎಸ್.ಜೈಶಂಕರ್ | Photo Credit : PTI
ಹೆಲ್ಸಿಂಕಿ: ಹಲವು ವರ್ಷಗಳಿಂದ ಯುರೋಪಿಯನ್ ರಾಷ್ಟ್ರಗಳು ಭಾರತದ ಭದ್ರತೆಗೆ ಧಕ್ಕೆ ತರುವ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಲೇ ಇವೆ. ಆದರೆ ಭಾರತವು, ಯುರೋಪ್‌ಗೆ ಹಾನಿಯುಂಟು ಮಾಡುವಂತಹದ್ದೇನನ್ನೂ ಮಾಡಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ರಶ್ಯದಿಂದ ಭಾರತವು ತೈಲ ಖರೀದಿಸುತ್ತಿರುವ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳ ವಿರೋಧವನ್ನು ಖಂಡಿಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, 2022ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯೇರಿಕೆಯನ್ನು ತಡೆಯಲು ರಶ್ಯದಿಂದ ತೈಲ ಖರೀದಿಸುವಂತೆ ಅಮೆರಿಕವು ನೇರವಾಗಿ ಭಾರತವನ್ನು ಕೇಳಿಕೊಂಡಿತ್ತು ಎಂದು ಹೇಳಿದ್ದಾರೆ.
ಫಿನ್ಲೆಂಡ್ ಪ್ರವಾಸದಲ್ಲಿರುವ ಜೈಶಂಕರ್ ಅವರು ಹೆಲ್ಸಿಂಕಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಉಕ್ರೇನ್ ಯುದ್ಧದ ಬಳಿಕ ಭಾರತವು ರಶ್ಯದ ಬಗೆಗೆ ಹೆಚ್ಚು ಸಹಾನುಭೂತಿಯನ್ನು ಹೊಂದಿದೆಯೇ ಹಾಗೂ ರಶ್ಯದಿಂದ ತೈಲ ಖರೀದಿಸಲು ಅದು ಹೆಚ್ಚು ಆಸಕ್ತವಾಗಿದೆಯೇ ಎಂದು ಪತ್ರಕರ್ತರೊಬ್ಬರು ಅವರನ್ನು ಪ್ರಶ್ನಿಸಿದ್ದರು. ಭಾರತವು ದರ ಹಾಗೂ ಲಭ್ಯತೆಯ ಆಧಾರದಲ್ಲಿ ತೈಲವನ್ನು ಖರೀದಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿ ರಶ್ಯನ್ ತೈಲವು ಲಭ್ಯವಿರುತ್ತದೆ . ಹೀಗಾಗಿ ಭಾರತ ಅದನ್ನು ಖರೀದಿಸುತ್ತಿದೆ ಎಂದು ಜೈಶಂಕರ್ ಹೇಳಿದರು.
ರಶ್ಯ-ಉಕ್ರೇನ್ ಯುದ್ಧದ ಬಳಿಕ ಅಮೆರಿಕ ಹಾಗೂ ಯುರೋಪ್‌ನ ರಾಷ್ಟ್ರಗಳು ಮಾಸ್ಕೋದ ಮೇಲೆ ನಿರ್ಬಂಧವನ್ನು ವಿಧಿಸಿದವು. ಯುರೋಪಿಯನ್ ರಾಷ್ಟ್ರಗಳು ರಶ್ಯದಿಂದ ತೈಲ ಸಂಪನ್ಮೂಲಗಳನ್ನು ಖರೀದಿಸುವ ಬದಲು ಭಾರತದ ಸಾಂಪ್ರಾದಾಯಿಕ ತೈಲ ಪೂರೈಕೆದಾರರಾದ ಗಲ್ಫ್ ರಾಷ್ಟ್ರಗಳೆಡೆಗೆ ಮುಖ ಮಾಡಿದವು. ಆ ಸಮಯದಲ್ಲಿ ರಶ್ಯದಿಂದ ತೈಲ ಖರೀದಿಸುವಂತೆ ಅಮೆರಿಕವು ಭಾರತವನ್ನು ನೇರವಾಗಿ ಕೇಳಿಕೊಂಡಿತ್ತು ಎಂದು ಜೈಶಂಕರ್ ತಿಳಿಸಿದರು.