ಇರಾನ್ ವಿರುದ್ಧ ಸ್ವತಂತ್ರವಾಗಿ ಕಾರ್ಯಾಚರಿಸಲು ಸನ್ನದ್ಧವಾಗುವಂತೆ ಸೇನೆಗೆ ಇಸ್ರೇಲ್ ಸೂಚನೆ
Photo Credit : PTI
ಟೆಲ್ ಅವೀವ್: ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ವಿರುದ್ಧ ಸ್ವತಂತ್ರವಾಗಿ ಕಾರ್ಯಾಚರಿಸುವ ಇಸ್ರೇಲ್‌ನ ಸಾಮರ್ಥ್ಯವನ್ನು ಕಾಪಾಡಲು ಸನ್ನದ್ಧರಾಗಿರುವಂತೆ ಸೇನೆಗೆ ತಾನು ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೂಚನೆ ನೀಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರಾಯೇಲ್ ಕಾಟ್ಝ್ ತಿಳಿಸಿದ್ದಾರೆ.
ಇರಾನ್ ಅಣ್ವಸ್ತ್ರಗಳನ್ನು ಹೊಂದುವುದನ್ನು ತಡೆಯುವ ಅಮೆರಿಕ- ಇಸ್ರೇಲ್‌ನ ಸಮಾನ ಗುರಿಯೂ ಸೇರಿದಂತೆ ವಿವಿಧ ಅಮೆರಿಕನ್ ಹಿತಾಸಕ್ತಿಗಳನ್ನು ಆಧರಿಸಿ ಇರಾನ್ ಜೊತೆ ಒಪ್ಪಂದವನ್ನು ಏರ್ಪಡಿಸಿಕೊಳ್ಳಲು ಅಮೆರಿಕ ಬಯಸುತ್ತಿದೆ. ಒಪ್ಪಂದವೇರ್ಪಡುವಾಗ ಈ ತತ್ವವನ್ನು ವಾಶಿಂಗ್ಟನ್ ಎತ್ತಿಹಿಡಿಯಬೇಕೆಂದು ಇಸ್ರೇಲ್ ಬಯಸುತ್ತದೆ. ಇರಾನ್‌ನ ಕ್ಷಿಪಣಿ ಕಾರ್ಯಕ್ರಮ ಹಾಗೂ ಅದು ಬೆಂಬಲಿಸುವ ದಾಳಿಕೋರ ಗುಂಪುಗಳ ಮೇಲೆ ನಿರ್ಬಂಧ ಹೇರಬೇಕಾಗಿದೆಯೆಂದು ಕಾಟ್ಝ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅಮೆರಿಕ-ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯು ಇರಾನ್‌ಗೆ ತೀವ್ರವಾದ ಹೊಡೆತವನ್ನು ನೀಡಿದೆ ಹಾಗೂ ಅದರ ಸೇನಾ ಸಾಮರ್ಥ್ಯವನ್ನು ಹಲವು ವರ್ಷಗಳಷ್ಟು ಹಿಂದಕ್ಕೆಸರಿಸಿದೆ ಎಂದು ಕಾಟ್ಝ್ ಹೇಳಿದ್ದಾರೆ.