ಇರಾನಿ ಹ್ಯಾಕರ್‌ಗಳಿಂದ ಅಮೆರಿಕದ ತನಿಖಾ ಸಂಸ್ಥೆ FBI ಡ್ರೋನ್‌ಗಳಿಗೆ ‘ಕನ್ನ’!
ಸಾಂದರ್ಭಿಕ ಚಿತ್ರ | Photo Credit : AP
ವಾಶಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐನ ಡ್ರೋನ್‌ಗಳ ಸಾಫ್ಟ್‌ವೇರ್ ಅನ್ನು ಭೇದಿಸಿದ್ದು, ಇದೀಗ ಆರಂಭಗೊಂಡಿರುವ ಫಿಫಾ ವಿಶ್ವಕಪ್ ಪಂದ್ಯಾವಳಿ ತನ್ನ ದಾಳಿಯ ಗುರಿಯಾಗಲಿದೆಯೆಂದು ಇರಾನ್ ಆಡಳಿತದ ಜೊತೆ ನಂಟು ಹೊಂದಿರುವ ಸಂಘಟನೆಯೊಂದು ಹೇಳಿಕೊಂಡಿದೆ.
ಎಫ್‌ಬಿಐ ಬಳಸುತ್ತಿರುವ ಫಸ್ಟ್ ಪರ್ಸನ್ ವ್ಯೆ (ಎಫ್‌ಪಿವಿ) ಡ್ರೋನ್‌ಗಳು ತೆಗೆದಿರುವಂತಹ ಪ್ರತಿಯೊಂದು ದೃಶ್ಯಗಳು ಹಾಗೂ ಪ್ರತಿಯೊಬ್ಬ ಶಂಕಿತನ ಛಾಯಾಚಿತ್ರಗಳನ್ನು ಹಲವು ತಿಂಗಳುಗಳಿಂದ ಸೆರೆಹಿಡಿದಿರುವುದಾಗಿ ಹ್ಯಾಕರ್ ಗುಂಪು ‘ಹಂಡಾಲಾ’ ಹೇಳಿಕೊಂಡಿದೆಯೆಂದು ಎಸ್‌ಐಟಿಇ ಬೇಹುಗಾರಿಕಾ ತಂಡ ಎಂಬ ಸಂಘಟನೆಯೊಂದು ತಿಳಿಸಿದೆ. ಇರಾನ್ ಬೆಂಬಲಿತ ಹ್ಯಾಕರ್‌ಗಳು ಈ ಬಗ್ಗೆ ನೀಡಿದ್ದ ಹೇಳಿಕೆಯೊಂದನ್ನು ಅದು ಬಹಿರಂಗಪಡಿಸಿದೆ.
ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳಿಗೆ ಬಳಸುವ ಮುಖಗುರುತು ಪತ್ತೆ ಹಾಗೂ ಲೈಸೆನ್ಸ್ ಪ್ಲೇಟ್ ಸ್ಕ್ರೀನಿಂಗ್ ಸೌಲಭ್ಯಗಳನ್ನು ಈ ಡ್ರೋನ್‌ಗಳು ಹೊಂದಿರುವುದಾಗಿ ತಿಳಿದುಬಂದಿದೆ.,
‘‘ವಿಶ್ವಕಪ್‌ನ ಭದ್ರತೆಯನ್ನು ನೀವು ಬಿಗಿಗೊಳಿಸುವುದು ಉತ್ತಮ. ನಾವು ಕೆಲವು ತಂಡಗಳನ್ನು ಇಷ್ಟಪಡುವುದಿಲ್ಲ. ಮರೆಯದಿರಿ. ಎಫ್‌ಪಿವಿಗಳು ಎಲ್ಲೆಡೆಯೂ ಇವೆ. ಅವುಗಳಲ್ಲೊಂದು ಯಾವಾಗ ನಿಮ್ಮ ತಂಡದ ಬಸ್‌ನಲ್ಲಿ ಪರ್ಯಾವಸಾನಗೊಳ್ಳಲಿದೆಯೋ ಎಂಬುದು ನಿಮಗೆ ತಿಳಿಯದು’’ ಎಂದು ಹಂಡಾಲಾ ಗುಂಪಿನ ಹೇಳಿಕೆಯನ್ನು ಉಲ್ಲೇಖಿಸಿ ಎಸ್‌ಐಟಿಇ ವರದಿ ಮಾಡಿದೆ.
ಅನಧಿಕೃತ ವೈಮಾನಿಕ ಸಾಧನಗಳಿಂದ ರಕ್ಷಣೆಯನ್ನು ಪಡೆಯಲು ಎಫ್‌ಬಿಐ ವಿಶ್ವಕಪ್ ಸ್ಟೇಡಿಯಂನಲ್ಲಿ ಡ್ರೋನ್‌ಗಳನ್ನು ನಿಯೋಜಿಸಿದೆ. ಅಮೆರಿಕವು ಆತಿಥ್ಯದಲ್ಲಿ ಫಿಫಾ ಪಂದ್ಯಗಳು ನಡೆಯುವ ಕ್ರೀಡಾಂಗಣಗಳಲ್ಲಿ ಎಫ್‌ಬಿಐ ಡ್ರೋನ್‌ಗಳನ್ನು ನಿಯೋಜಿಸಿದೆ.
ಇರಾನ್ ಬೆಂಬಲಿತ ಗುಂಪುಗಳು ಸೈಬರ್ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆಯೆಂದು ಅಮೆರಿಕದ ಕಾನೂನು ಇಲಾಖೆ ಈ ಹಿಂದೆ ಎಚ್ಚರಿಕೆ ನೀಡಿತ್ತು.