×
Ad

ಪಾಕ್ ವಾಯು ಪ್ರದೇಶದಿಂದ ದೂರ ಸರಿಯುತ್ತಿರುವ ಯೂರೋಪಿಯನ್ ವಿಮಾನಗಳು!

Update: 2025-05-03 07:39 IST

ಸಾಂದರ್ಭಿಕ ಚಿತ್ರ PC: freepik

ಹೊಸದಿಲ್ಲಿ: ಭಾರತೀಯ ವಿಮಾನಗಳು ತನ್ನ ವಾಯುಪ್ರದೇಶ ಪ್ರವೇಶಿಸುವುದನ್ನು ಪಾಕಿಸ್ತಾನ ನಿಷೇಧಿಸಿದ ಬೆನ್ನಲ್ಲೇ, ಯೂರೋಪ್ ಮತ್ತು ಬ್ರಿಟಿಷ್ ವಿಮಾನಗಳು ಕೂಡಾ ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಹಾರಾಡುವುದನ್ನು ತಪ್ಪಿಸಿಕೊಳ್ಳುತ್ತಿವೆ. ಸ್ವಿಸ್ ಸೇರಿದಂತೆ ಲುಫ್ತಾನ್ಸಾ ಸಮೂಹ ಕೂಡಾ ಈ ನಡೆಯನ್ನು ದೃಢಪಡಿಸಿದೆ.

"ಏರ್ ಫ್ರಾನ್ಸ್, ಬ್ರಿಟಿಷ್ ಏರ್‌ವೇಸ್ ಮತ್ತು ಸ್ವಿಸ್ ವಿಮಾನಗಳು ತಮ್ಮ ವಾಯುಮಾರ್ಗವನ್ನು ಏಪ್ರಿಲ್ 30ರಿಂದ ಬದಲಿಸಿಕೊಂಡು ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಹಾರಾಡುವುದನ್ನು ತಪ್ಪಿಸಿವೆ. ಉತ್ತರ ಪಾಕಿಸ್ತಾನದ ಕೆಲ ವಾಯು ಯಾನದ ಬಗ್ಗೆ ನೋಟಂ ಲಭ್ಯವಾಗಿಲ್ಲ; ಈ ಕಾರಣದಿಂದ ಇಲ್ಲಿ ಕೂಡಾ ಪಾಕ್ ವಾಯುಪ್ರದೇಶವನ್ನು ಹೊರತುಪಡಿಲಾಗಿದೆ ಎಂಬ ಅಭಿಪ್ರಾಯಕ್ಕೆ ಬರಬಹುದು" ಎಂದು ವಿಮಾನಯಾನ ಟ್ರ್ಯಾಕಿಂಗ್ ಸೈಟ್ ಫ್ಲೈಟ್  ರಾಡಾರ್24 ವರದಿ ಮಾಡಿದೆ. ಲುಫ್ತಾನ್ಸಾ , ಐಟಿಎ ಏರ್‌ವೇಸ್ ಮತ್ತು ಎಲ್ಓಟಿ ಕೂಡಾ ಮೇ 2ರಿಂದ ಈ ಪಟ್ಟಿಗೆ ಸೇರಿವೆ. ನೋಟಂ ಅಂದರೆ ವಿಮಾನಮಾರ್ಗದಲ್ಲಿ ಸಂಭಾವ್ಯ ಅಪಾಯಗಳ ಬಗ್ಗೆ ಪೈಲಟ್ ಗಳಿಗೆ ನೀಡುವ ಎಚ್ಚರಿಕೆಯಾಗಿದೆ.

ಕೆಲ ವಿಮಾನಗಳು ನೋಟಂ ಪಡೆಯದಿದ್ದರೂ ಪಾಕಿಸ್ತಾನದ ಮೂಲಕ ಹಾರಾಟವನ್ನು ತಪ್ಪಿಸಿವೆ. ಇವುಗಳಲ್ಲಿ ಲುಫ್ತಾನಾದ ಮ್ಯೂನಿಚ್-ದೆಹಲಿ, ಫ್ರಾಂಕ್ಫರ್ಟ್- ಮುಂಬೈ ಮತ್ತು ಬ್ಯಾಂಕಾಕ್-ಮ್ಯೂನಿಚ್ ವಿಮಾನಗಳು ಸೇರಿವೆ. ಎಲ್ಓಟಿಯ ವಾರ್ಸೋ-ದೆಹಲಿ ಮತ್ತು ಐಟಿಎಯ ರೋಮ್-ದೆಹಲಿ ವಿಮಾನಗಳು ಕೂಡಾ ಪಥ ಬದಲಿಸಿವೆ. ಇದರಿಂದಾಗಿ ಈ ವಿಮಾನಗಳ ಹಾರಾಟ ಸಮಯ ಒಂದು ಗಂಟೆ ಅಧಿಕವಾಗಲಿದೆ.

ಪ್ರತಿ ದೇಶಗಳೂ ಯಾವುದೇ ಪ್ರದೇಶದಲ್ಲಿ ತಮ್ಮ ವಿಮಾನಗಳು ಹಾರಾಟ ನಡೆಸುವ ಸಂದರ್ಭದಲ್ಲಿ ತಮ್ಮದೇ ಆದ ಅಪಾಯ ಸಾಧ್ಯತೆ ಸಮೀಕ್ಷೆಯನ್ನು ನಡೆಸುತ್ತವೆ. ಒಂದು ವೇಳೆ ಅಸುರಕ್ಷಿತ ಎಂದು ಕಂಡುಬಂದರೆ ನೋಟಂ ಇಲ್ಲದೆಯೇ ವಿಮಾನ ಆ ಪ್ರದೇಶದ ಮೂಲಕ ಹಾದುಹೋಗದಂತೆ ಎಚ್ಚರ ವಹಿಸುತ್ತವೆ. "ನಾವು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ಭಾರತ-ಪಾಕಿಸ್ತಾನ ಸಂಘರ್ಷ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎಲ್ಲ ವಿಮಾನಗಳು ಸಂಘರ್ಷ ವಲಯದಿಂದ ಪರ್ಯಾಯ ಮಾರ್ಗವನ್ನು ಕಂಡುಕೊಂಡಿವೆ. ಸಂಘರ್ಷ ಉಲ್ಬಣಗೊಂಡ ತಕ್ಷಣ ಪ್ರತಿ ವಿಮಾನಯಾನ ಕಂಪನಿಗಳು ಕೊನೆ ಕ್ಷಣದಲ್ಲಿ ಪಥ ಬದಲಿಸುವ ನಿರ್ಧಾರಕ್ಕೆ ಬಂದಿವೆ" ಎಂದು ಪ್ರಮುಖ ಪಾಶ್ಚಿಮಾತ್ಯ ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News