ಗಾಝಾದ ಪ್ರತೀ ಮಗುವೂ ನಮ್ಮ ಶತ್ರು: ಇಸ್ರೇಲ್ ಮಾಜಿ ಸಂಸದನ ವಿವಾದಾತ್ಮಕ ಹೇಳಿಕೆ
PC : aljazeera.com
ಟೆಲ್‍ಅವೀವ್: ಗಾಝಾದಲ್ಲಿನ ಯುದ್ಧವು ತೀವ್ರಗೊಳ್ಳುತ್ತಿದ್ದಂತೆಯೇ ಫೆಲೆಸ್ತೀನಿಯನ್ ಪ್ರದೇಶ ಮತ್ತು ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಇಸ್ರೇಲ್ ನ ಕಟ್ಟಾ ಬಲಪಂಥೀಯ ರಾಜಕಾರಣಿ, ಮಾಜಿ ಸಂಸದ ಮೋಶೆ ಫೀಗ್ಲಿನ್ ನೀಡಿರುವ ಹೇಳಿಕೆಗೆ ವ್ಯಾಪಕ ಆಕ್ರೋಶ ಮತ್ತು ಖಂಡನೆ ವ್ಯಕ್ತವಾಗಿದೆ.
ಇಸ್ರೇಲ್ ನ ಟಿವಿ ಚಾನೆಲ್ ಜೊತೆ ಮಾತನಾಡುತ್ತಿದ್ದ ಫೀಗ್ಲಿನ್ ` ಗಾಝಾದಲ್ಲಿ ನಮ್ಮ ಶತ್ರುಗಳು ಹಮಾಸ್ ಅಲ್ಲ ಅಥವಾ ಹಮಾಸ್ ನ ಮಿಲಿಟರಿ ವಿಭಾಗವಲ್ಲ. ಗಾಝಾದಲ್ಲಿನ ಪ್ರತಿಯೊಂದು ಮಗುವೂ ನಮ್ಮ ಶತ್ರು. ನಾವು ಗಾಝಾವನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಒಂದು ಮಗುವನ್ನೂ ಅಲ್ಲಿ ಬಿಡಬಾರದು. ಅಲ್ಲಿ ಬೇರೆ ಗೆಲವು ಇಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ. 2025ರ ಎಪ್ರಿಲ್ ನಲ್ಲಿ ಫೆಲೆಸ್ತೀನಿಯನ್ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದ ಅಂಕಿಅಂಶ ಪ್ರಕಾರ 2023ರ ಅಕ್ಟೋಬರ್‍ನಲ್ಲಿ ಯುದ್ಧ ಆರಂಭಗೊಂಡಂದಿನಿಂದ ಗಾಝಾ ಪಟ್ಟಿಯಲ್ಲಿ 17,000ಕ್ಕೂ ಅಧಿಕ ಮಕ್ಕಳು ಹತರಾಗಿದ್ದಾರೆ. ಜೊತೆಗೆ, ಯುದ್ಧದಿಂದ ಜರ್ಜರಿತಗೊಂಡಿರುವ ಗಾಝಾ ಪಟ್ಟಿಗೆ ಮಾನವೀಯ ಸಹಾಯ ಪೂರೈಕೆಗೆ ಇಸ್ರೇಲ್ ನಿರ್ಬಂಧ ವಿಧಿಸಿದ್ದರಿಂದ ಸುಮಾರು 14,000 ಶಿಶುಗಳು ಸಾವನ್ನಪ್ಪಬಹುದು ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.