Photo Credit : indiatoday.in

ಟೆಹ್ರಾನ್: ಇರಾನ್‌ ನ ಪ್ರಮುಖ ತೈಲ ಕೇಂದ್ರವಾದ ಖಾರ್ಗ್ ದ್ವೀಪದ ಬಳಿ ಶನಿವಾರ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಇರಾನ್‌ ನ ಸರಕಾರಿ ಮಾಧ್ಯಮ ವರದಿ ಮಾಡಿದೆ. ಇರಾನ್‌ ನ ತೈಲ ಟ್ಯಾಂಕರ್‌ ನ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ ಬಳಿಕ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ʼರಾಯಿಟರ್ಸ್ʼ ವರದಿ ಮಾಡಿದೆ.

ಘಟನೆಯಲ್ಲಿ ಈವರೆಗೆ ಯಾವುದೇ ಸಾವುನೋವು ವರದಿಯಾಗಿಲ್ಲ. ಆದರೆ, ಸ್ಫೋಟದಿಂದ ಉಂಟಾಗಿರುವ ಹಾನಿಯ ಪ್ರಮಾಣದ ಬಗ್ಗೆ ಇರಾನ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.

ಆಯಕಟ್ಟಿನ ಕಡಲ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಸಂಘರ್ಷ ತೀವ್ರಗೊಂಡಿದೆ. ತಿಂಗಳುಗಳಿಂದ ನಡೆಯುತ್ತಿರುವ ಅಮೆರಿಕ–ಇರಾನ್ ಸಂಘರ್ಷದ ನಡುವೆ ಈ ಘಟನೆ ನಡೆದಿದೆ.

ಲಾರಕ್ ದ್ವೀಪದಲ್ಲಿ ದಾಳಿ

ಆಗಸ್ಟ್ 30ರಂದು ಅಮೆರಿಕವು ಇರಾನ್‌ ನ ನೆಲೆಗಳ ಮೇಲೆ ಹೊಸ ದಾಳಿ ನಡೆಸಿತ್ತು. ಹಾರ್ಮುಝ್ ಜಲಸಂಧಿಯ ಸಮೀಪದ ಲಾರಕ್ ದ್ವೀಪದಲ್ಲಿರುವ ಇರಾನ್‌ ನ ನೆಲೆಗಳನ್ನು ಅಮೆರಿಕ ಪಡೆಗಳು ಗುರಿಯಾಗಿಸಿಕೊಂಡಿದ್ದವು.

ಸಮುದ್ರದಲ್ಲಿ ಗಣಿಗಳನ್ನು ಅಳವಡಿಸುವ ಹಾಗೂ ಕಡಲ ಸಂಚಾರಕ್ಕೆ ಬೆದರಿಕೆ ಒಡ್ಡುವ ಇರಾನ್ ಪಡೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಜೋರ್ಡಾನ್‌ ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು.

ಸೆಪ್ಟೆಂಬರ್ 1ರಂದು ಮತ್ತೊಂದು ದಾಳಿ

ಸೆಪ್ಟೆಂಬರ್ 1ರಂದು ಇರಾನ್‌ ನ ದಕ್ಷಿಣ ಕರಾವಳಿಯ ಮೇಲೆ ಅಮೆರಿಕ ಮತ್ತೊಂದು ದಾಳಿ ನಡೆಸಿದ ಬಳಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿತ್ತು. ಇರಾನ್‌ ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಸ್ಥಾಪನೆಗಳು, ಕಡಲ ಸ್ವತ್ತುಗಳು, ಗಣಿಗಳನ್ನು ಅಳವಡಿಸುವ ಸಾಮರ್ಥ್ಯಗಳು ಮತ್ತು ಸಂವಹನ ತಾಣಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಅಮೆರಿಕ ಸೇನೆ ತಿಳಿಸಿತ್ತು.

‘ವಾಯು ರಕ್ಷಣಾ ತಾಣಗಳು, ರಾಡಾರ್ ವ್ಯವಸ್ಥೆಗಳು, ಕಡಲ ಸ್ವತ್ತುಗಳು ಮತ್ತು ಸೌಲಭ್ಯಗಳು, ಗಣಿಗಳನ್ನು ಅಳವಡಿಸುವ ಸಾಮರ್ಥ್ಯಗಳು ಹಾಗೂ ಸಂವಹನ ತಾಣಗಳು ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೆಲೆಗಳ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿವೆ. ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮತ್ತು ಅಮೆರಿಕದ ಸೇನಾ ಸಿಬ್ಬಂದಿ ಅಡ್ಡಿಪಡಿಸಿ IRGC ಇತ್ತೀಚೆಗೆ ದಾಳಿ ನಡೆಸಿತ್ತು. ಈ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ಪಡೆಗಳು IRGC ನೆಲೆಗಳ ಮೇಲೆ ದಾಳಿ ನಡೆಸಿವೆ’ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಎಕ್ಸ್‌ ನಲ್ಲಿ ತಿಳಿಸಿತ್ತು.

ಇದಕ್ಕೆ ಪ್ರತಿಯಾಗಿ ಇರಾನ್ ಗಲ್ಫ್ ಪ್ರದೇಶದಾದ್ಯಂತ ಅಮೆರಿಕ ಮತ್ತು ಅದರ ಮಿತ್ರಪಕ್ಷಗಳ ನೆಲೆಗಳ ಮೇಲೆ ದಾಳಿ ನಡೆಸಿದೆ. ಬಹ್ರೇನ್, ಜೋರ್ಡಾನ್ ಮತ್ತು ಇರಾಕ್‌ ನಲ್ಲಿರುವ ಅಮೆರಿಕ ಹಾಗೂ ಮಿತ್ರಪಕ್ಷಗಳ ನೆಲೆಗಳ ಮೇಲೂ ಇರಾನ್ ದಾಳಿ ನಡೆಸಿದೆ.

ಹಾರ್ಮುಝ್ ಜಲಸಂಧಿ ಕೇಂದ್ರಬಿಂದು

ಇತ್ತೀಚಿನ ಸಂಘರ್ಷದಲ್ಲಿ ಹಾರ್ಮುಝ್ ಜಲಸಂಧಿಯು ಪ್ರಮುಖ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಈ ಜಲಮಾರ್ಗದ ಮೂಲಕ ನಡೆಯುವ ಸಾಗಣೆಯ ಮೇಲೆ ಇರಾನ್ ನಿರ್ಬಂಧಗಳನ್ನು ಮುಂದುವರಿಸಿದೆ. ಆದರೆ, ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಈ ಜಲಮಾರ್ಗದ ಮೇಲಿನ ಇರಾನ್ ನ ನಿಯಂತ್ರಣವನ್ನು ಪ್ರಶ್ನಿಸಲು ಅಮೆರಿಕ ಪ್ರಯತ್ನಿಸುತ್ತಿದೆ.

ಹಾರ್ಮುಝ್ ಜಲಸಂಧಿಯು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿದೆ. ವಿಶ್ವದ ತೈಲ ಪೂರೈಕೆಯ ಗಮನಾರ್ಹ ಪ್ರಮಾಣ ಸಾಮಾನ್ಯವಾಗಿ ಈ ಜಲಸಂಧಿಯ ಮೂಲಕ ಸಾಗುತ್ತದೆ.

ಸಂಘರ್ಷವು ಕಡಲ ಸಂಚಾರಕ್ಕೂ ವಿಸ್ತರಿಸಿದೆ. ಹಾರ್ಮುಝ್ ಜಲಸಂಧಿಯ ಸಮೀಪ ಹಡಗುಗಳನ್ನು ಒಳಗೊಂಡ ಗುಂಡಿನ ಚಕಮಕಿ ಮತ್ತು ದಾಳಿಗಳಿಂದ ಸಾಗಣೆಗೆ ಅಡ್ಡಿಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಅಮೆರಿಕದ ದಾಳಿಗಳು ಹಾಗೂ ಅವುಗಳಿಗೆ ಇರಾನ್ ನೀಡುತ್ತಿರುವ ಪ್ರತೀಕಾರದ ಕ್ರಮಗಳಿಂದ ಜಾಗತಿಕ ತೈಲ ಪೂರೈಕೆಗೆ ಮತ್ತಷ್ಟು ಅಡ್ಡಿಯಾಗುವ ಆತಂಕ ಹೆಚ್ಚಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor