Photo credit: BBC

ಹೊಸದಿಲ್ಲಿ : ವಿಶ್ವಸಂಸ್ಥೆಯು ಹೊಸ ವಿಶ್ವ ಭೂಪಟಕ್ಕೆ ಅನುಮೋದನೆ ನೀಡಿದೆ. ಈ ಹೊಸ ನಕ್ಷೆಯು ವಿವಿಧ ದೇಶಗಳ ನೈಜ ಗಾತ್ರವನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸುತ್ತದೆ. ಶತಮಾನಗಳ ಹಿಂದಿನ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಆಫ್ರಿಕಾ ದೇಶಗಳು ಈ ನಿರ್ಣಯವನ್ನು ಪ್ರಸ್ತಾಪಿಸಿದ್ದವು.

“ನಕ್ಷೆಯನ್ನು ಸರಿಪಡಿಸಿ” “Correct the Map” ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಶುಕ್ರವಾರ ಅಂಗೀಕರಿಸಿದೆ. 450 ವರ್ಷಗಳಿಂದ ವಸಾಹತುಶಾಹಿ ಕಾಲದ ನಕ್ಷೆಗಳಲ್ಲಿ ಆಫ್ರಿಕಾದ ಗಾತ್ರವನ್ನು ದೃಷ್ಟಿಗೋಚರವಾಗಿ ಚಿಕ್ಕದಾಗಿ ತೋರಿಸಲಾಗುತ್ತಿದ್ದು, ಇದರಿಂದ ವಿಶ್ವದಾದ್ಯಂತ ಮಾಧ್ಯಮ, ಶಿಕ್ಷಣ ಮತ್ತು ನೀತಿಯ ವಿಚಾರದಲ್ಲಿ ಆಫ್ರಿಕಾ ಖಂಡದ ಕುರಿತು ಜನರ ಗ್ರಹಿಕೆಯ ಮೇಲೂ ಪರಿಣಾಮ ಬೀರಿದೆ. ಈ ಅನ್ಯಾಯವನ್ನು ಸರಿಪಡಿಸುವುದು ನಿರ್ಣಯದ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಆಫ್ರಿಕಾ ಒಕ್ಕೂಟದ (AU) ಸದಸ್ಯ ರಾಷ್ಟ್ರಗಳು ಮತ್ತು ಬಹಾಮಾಸ್ ಮಂಡಿಸಿದ ಈ ನಿರ್ಣಯಕ್ಕೆ 164-1 ಮತಗಳ ಮೂಲಕ ಬೆಂಬಲ ದೊರೆಯಿತು. ಆರು ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.

ವ್ಯಾಪಕವಾಗಿ ಬಳಕೆಯಲ್ಲಿರುವ ಮರ್ಕೇಟರ್ ನಕ್ಷೆಯ ಬಳಕೆಯನ್ನು ಸೀಮಿತಗೊಳಿಸುವ ಅಭಿಯಾನವನ್ನು ಆಫ್ರಿಕಾ ಒಕ್ಕೂಟದ ಪರವಾಗಿ ಟೋಗೋ ಮುನ್ನಡೆಸಿತು.

"ನ್ಯಾಯೋಚಿತ ಜಗತ್ತು ನ್ಯಾಯಯುತವಾದ ನಕ್ಷೆಯಿಂದ ಆರಂಭವಾಗುತ್ತದೆ,” ಎಂದು ಮತದಾನದ ಸಂದರ್ಭದಲ್ಲಿ ಟೋಗೋದ ವಿದೇಶಾಂಗ ಸಚಿವ ರಾಬರ್ಟ್ ಡಸ್ಸಿ Reuters ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ನಿರ್ಣಯವು ‘ಈಕ್ವಲ್ ಅರ್ಥ್’ ಪ್ರೊಜೆಕ್ಷನ್ ಅನ್ನು ಉತ್ತೇಜಿಸುತ್ತದೆ. ಈ ನಕ್ಷಾ ಪ್ರಕ್ಷೇಪಣೆಯು ಖಂಡಗಳ ನೈಜ ಗಾತ್ರವನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor