Fact Check | Flydubai ಘಟನೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಮೋದಿ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ ಎಂದು ಲಾಪಿಡ್ ಹೇಳಿಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊ AI ಮೂಲಕ ಮಾರ್ಪಾಡು
Photo: x.com/VinayDokania
ಹೊಸದಿಲ್ಲಿ: Flydubai ವಿಮಾನ ಅಪಹರಣ ಯತ್ನ ಘಟನೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಇಸ್ರೇಲ್ ನ ವಿರೋಧ ಪಕ್ಷದ ನಾಯಕ ಯಾಯಿರ್ ಲಾಪಿಡ್ ಹೇಳಿದ್ದಾರೆ ಎಂಬರ್ಥದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಮಾರ್ಪಡು ಮಾಡಿರುವ ಡೀಪ್ ಫೇಕ್ ಎಂದು ತಿಳಿದು ಬಂದಿದೆ.
‘ನೆತನ್ಯಾಹು ಅವರು ಮೋದಿ ಅವರ ರಾಜಕೀಯ ಕಾರ್ಯತಂತ್ರವನ್ನೇ ಅನುಸರಿಸುತ್ತಿದ್ದಾರೆ. ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ರಾಜಕೀಯ ನಿಲುವು ರೂಪಿಸಿಕೊಳ್ಳಲು ಮೋದಿ ಅವರು 2019ರ ಪುಲ್ವಾಮಾ ದಾಳಿಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದರು’ ಎಂದು ಯಾಯಿರ್ ಲಾಪಿಡ್ ಹೇಳಿದ್ದಾರೆ ಎಂಬುದಾಗಿ ವೀಡಿಯೊದಲ್ಲಿ ಬಿಂಬಿಸಲಾಗಿತ್ತು.
ಇತ್ತೀಚೆಗೆ ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದ ಇಬ್ಬರು ಪೈಲಟ್‌ಗಳ ನಡುವೆ ಜಗಳ ನಡೆದಿತ್ತು. ಇದರ ಪರಿಣಾಮವಾಗಿ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಗೆ (Tabuk) ತಿರುಗಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಈ ಘಟನೆಯೊಂದಿಗೆ ಲಾಪಿಡ್ ಅವರ ಹೆಸರಿನಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಜೋಡಿಸಲಾಗಿದೆ.
ವಾಸ್ತವವೇನು?
ನೆತನ್ಯಾಹು ಅವರು ಮೋದಿ ಅವರ ರಾಜಕೀಯ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಯಾಯಿರ್ ಲಾಪಿಡ್ ಹೇಳಿರುವುದಕ್ಕೆ ಯಾವುದೇ ಅಧಿಕೃತ ದೃಶ್ಯಾವಳಿ ಲಭ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊವನ್ನು AI ತಂತ್ರಜ್ಞಾನದ ಮೂಲಕ ಮಾರ್ಪಡಿಸಲಾಗಿದೆ. ಹೀಗಾಗಿ, ಲಾಪಿಡ್ ಅವರು ಇಂತಹ ಹೇಳಿಕೆ ನೀಡಿದ್ದಾರೆ ಎಂಬ ಪ್ರತಿಪಾದನೆ ಸತ್ಯವಲ್ಲ.