Photo :X.com /AJEnglish

ರಿಯಾದ್, ಅ.11: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶನಿವಾರ ನಡೆದ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 309 ಜನರು ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನದ ಸಾಮಾನ್ಯ ಪ್ರಾಧಿಕಾರ (GACA) ತಿಳಿಸಿದೆ.

ಮೃತರಲ್ಲಿ ನಾಲ್ವರು ಸೌದಿ ಪ್ರಜೆಗಳು ಸೇರಿದ್ದಾರೆ. ಉಳಿದವರಲ್ಲಿ ಇಬ್ಬರು ಬಾಂಗ್ಲಾದೇಶದವರು ಹಾಗೂ ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ, ಫೆಲೆಸ್ತೀನ್ ಮತ್ತು ಸುಡಾನ್‌ ನ ತಲಾ ಒಬ್ಬರು ಇದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯಿಂದ ಆಸ್ತಿಪಾಸ್ತಿಗೂ ಹಾನಿಯಾಗಿದ್ದು, ಅದರ ಪ್ರಮಾಣವನ್ನು ನಿರ್ಧರಿಸಲಾಗುತ್ತಿದೆ ಎಂದು GACA ಹೇಳಿದೆ.

ಹೌತಿಗಳ ವಿರುದ್ಧ ಕಾರ್ಯಾಚರಣೆ

ನೆರೆಯ ಯೆಮನ್‌ ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಸೌದಿ ನೇತೃತ್ವದ ಒಕ್ಕೂಟವು ಪ್ರಮುಖ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ, ಕಳೆದ ವಾರದಲ್ಲಿ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಲವು ಬಾರಿ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 6 ಮತ್ತು 7ರಂದು ಕಿಂಗ್ ಖಾಲಿದ್ ಹಾಗೂ ಅಭಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಗಳಲ್ಲಿ ಮೂವರು ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿದ್ದರು ಎಂದು GACA ತಿಳಿಸಿದೆ.

225 ವಿಮಾನಗಳ ಹಾರಾಟ ರದ್ದು

ಇತ್ತೀಚಿನ ದಾಳಿಯ ಬಳಿಕ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಹಲವು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು. ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ, ಹಾರಾಟದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಯಿತು.

ಫ್ಲೈಟ್‌ರಾಡಾರ್24 ಮಾಹಿತಿ ಪ್ರಕಾರ, ಸ್ಥಳೀಯ ಕಾಲಮಾನ ಮಧ್ಯಾಹ್ನ 2.05ಕ್ಕೆ ಕೊನೆಯ ವಿಮಾನ ಇಳಿದ ಸುಮಾರು ನಾಲ್ಕು ಗಂಟೆಗಳ ಬಳಿಕವೂ ರಿಯಾದ್‌ ಗೆ ಆಗಮಿಸಬೇಕಿದ್ದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗುತ್ತಿತ್ತು. ಫ್ಲೈಟ್‌ಅವೇರ್ ಪ್ರಕಾರ, ಹಿಂದಿನ 24 ಗಂಟೆಗಳಲ್ಲಿ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕನಿಷ್ಠ 225 ವಿಮಾನಗಳ ಹಾರಾಟ ರದ್ದಾಗಿತ್ತು.

ವಿಮಾನ ನಿಲ್ದಾಣದಿಂದ ದೂರವಿರಿ

ರಿಯಾದ್‌ ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು ದಾಳಿಯ ಬಗ್ಗೆ ಮಾಹಿತಿ ಹೊಂದಿರುವುದಾಗಿ ತಿಳಿಸಿದ್ದು, ಅಮೆರಿಕದ ನಾಗರಿಕರು ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ದೂರವಿರುವಂತೆ ಸೂಚಿಸಿದೆ.

ಇದೇ ವೇಳೆ, ಗಂಭೀರ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಪ್ರದೇಶದಿಂದ ದೂರವಿರುವಂತೆ ಬ್ರಿಟನ್ ರಾಯಭಾರ ಕಚೇರಿಯೂ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor