ಆಕ್ಸಿಯಮ್- 4 ಮಿಷನ್ ಯಶಸ್ವಿ ಉಡಾವಣೆ
ಹೊಸದಿಲ್ಲಿ : ಆಕ್ಸಿಯಮ್ 4 ಮಿಷನ್(Axiom-4 mission) ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.
ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ವಿಸ್ಕಿ ಬಾಹ್ಯಾಕಾಶಕ್ಕೆ ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ.
ಹದಿನೈದು ದಿನಗಳ ಅವಧಿಯ ಈ ಕಾರ್ಯಾಚರಣೆಯಲ್ಲಿ, ಆಕ್ಸಿಯಮ್-4 ಮಿಷನ್‌ನ ನಾಲ್ವರು ಸದಸ್ಯರ ತಂಡವು 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ಅವುಗಳಲ್ಲಿ ಏಳು ಪ್ರಯೋಗಗಳನ್ನು ಭಾರತೀಯ ಸಂಶೋಧಕರು ಪ್ರಸ್ತಾಪಿಸಿದ್ದಾರೆ.
ಆಕ್ಸಿಯಮ್ 4 ಮಿಷನ್ ಉಡಾವಣೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 90 ಪ್ರತಿಶತ ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಈ ಮೊದಲು ಸ್ಪೇಸ್ಎಕ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.
ಹವಾಮಾನ ಮತ್ತು ತಾಂತ್ರಿಕ ದೋಷಗಳಿಂದಾಗಿ ಆಕ್ಸಿಯಮ್ -4 ಮಿಷನ್ ಉಡಾವಣೆಯು ಹಲವು ಬಾರಿ ವಿಳಂಬವಾಗಿತ್ತು. ಜೂನ್ 25 ನಾಸಾ ಘೋಷಿಸಿದ ಆರನೇ ದಿನಾಂಕವಾಗಿತ್ತು.
ʼನಾನು ಉಪಕರಣಗಳನ್ನು ಮಾತ್ರವಲ್ಲದೆ, ಶತಕೋಟಿ ಹೃದಯಗಳ ಭರವಸೆಗಳು ಮತ್ತು ಕನಸುಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತಿದ್ದೇನೆ ಎಂದು ಗ್ರೂಪ್ ಕ್ಯಾಪ್ಟನ್ ಶುಕ್ಲಾ ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿದ್ದರು.
ತಮ್ಮ ಐತಿಹಾಸಿಕ ಪ್ರಯಾಣಕ್ಕೆ ಕೆಲವು ಗಂಟೆಗಳ ಮೊದಲು, ʼನನಗಾಗಿ ಕಾಯಿರಿ, ನಾನು ಬರುತ್ತೇನೆʼ ಎಂದು ಗ್ರೂಪ್ ಕ್ಯಾಪ್ಟನ್ ಶುಕ್ಲಾ ತಮ್ಮ ಕುಟುಂಬಕ್ಕೆ ಸಂದೇಶವನ್ನು ಕಳುಹಿಸಿದ್ದಾರೆ.
ಸರಿಸುಮಾರು 28 ಗಂಟೆಗಳ ಪ್ರಯಾಣದ ನಂತರ ಆಕ್ಸಿಯಮ್ -4 ಗಗನಯಾತ್ರಿಗಳು ನಾಳೆ ಸಂಜೆ 4.30ರ ಸುಮಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯಲಿದ್ದಾರೆ ಎಂದು ತಿಳಿದು ಬಂದಿದೆ.