ಕೆನಡಾದಲ್ಲಿ ಕಪಿಲ್ ಶರ್ಮಾ ಮಾಲಕತ್ವದ ಕೆಫೆ ಮೇಲೆ ಗುಂಡಿನ ದಾಳಿ
PC | AP
ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಖ್ಯಾತ ಕಾಮೆಡಿಯನ್ ಕಪಿಲ್ ಶರ್ಮಾ ಮಾಲಕತ್ವದ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಕೆಫೆ ಪ್ರಾರಂಭಗೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯ ಹೊಣೆಯನ್ನು ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ಜಿತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ವರದಿಯಾಗಿದೆ.
ಕ್ಯಾಪ್ಸ್ ಕೆಫೆ ಎಂಬ ಹೆಸರಿನಲ್ಲಿ ಕಪಿಲ್ ಶರ್ಮಾ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಸರ್ರೆಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದಾರೆ. ಅವರ ಪತ್ನಿ ಗಿನ್ನಿ ಛಾತ್ರಾ ಕೂಡಾ ಪಾಲುದಾರರಾಗಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿ ಲಘು ಉಪಾಹಾರ ಪೂರೈಕೆ ಮಾಡಲಾಗುತ್ತಿದೆ.
ಬುಧವಾರ ರಾತ್ರಿ ನಡೆದಿರುವ ಈ ಘಟನೆಯ ವಿಡಿಯೊ ವೈರಲ್ ಆಗಿದೆ. ಕಾರಿನಲ್ಲಿ ಕುಳಿತಿರುವ ವ್ಯಕ್ತಿಯೋರ್ವ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ 9 ಸುತ್ತಿನ ಗುಂಡಿನ ದಾಳಿ ನಡೆಸಿರುವುದು ಸೆರೆಯಾಗಿದೆ.
ಹರ್ಜಿತ್ ಸಿಂಗ್ ಲಡ್ಡಿ ರಾಷ್ಟ್ರೀಯ ತನಿಖಾ ದಳದ ವಾಂಟೆಡ್ ಲಿಸ್ಟ್‌ನಲ್ಲಿದ್ದಾನೆ. ಈತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಕಾಮೆಡಿಯನ್ ಕಪಿಲ್ ಶರ್ಮ ನೀಡಿದ್ದ ಹೇಳಿಕೆಯಿಂದ ಆಕ್ರೋಶಗೊಂಡು ಗುಂಡಿನ ದಾಳಿಗೆ ಸೂಚಿಸಿದ್ದ ಎಂದು ಹೇಳಲಾಗಿದೆ.