×
Ad

ಗಾಝಾ ಶಾಂತಿ ಮಂಡಳಿ ಅನಾವರಣಗೊಳಿಸಿದ ಟ್ರಂಪ್: ಗಾಝಾ ಮರು ನಿರ್ಮಾಣದ ಪ್ರತಿಜ್ಞೆ, ಭಾರತ ಸೇರಿದಂತೆ 12 ದೇಶಗಳು ಗೈರು

Update: 2026-01-22 20:45 IST

ಡೊನಾಲ್ಡ್ ಟ್ರಂಪ್ |  Photo Credit ; PTI 

ದಾವೋಸ್, ಜ.22: ಬಹುನಿರೀಕ್ಷಿತ ಗಾಝಾ ಶಾಂತಿ ಮಂಡಳಿಯನ್ನು ಸ್ವಿಝಲ್‍ಲ್ಯಾಂಡ್‍ನ ದಾವೋಸ್‍ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಅನಾವರಣಗೊಳಿಸಿದ್ದು ಯುಎಇ, ಪಾಕಿಸ್ತಾನ ಸೇರಿದಂತೆ 35 ರಾಷ್ಟ್ರಗಳು ಮಂಡಳಿಯ ಸದಸ್ಯನಾಗಲು ಒಪ್ಪಿಕೊಂಡಿವೆ. ಭಾರತ ಸೇರಿದಂತೆ 12 ದೇಶಗಳ ಪ್ರತಿನಿಧಿಗಳು ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಹಾಜರಿರಲಿಲ್ಲ.

ಗಾಝಾವನ್ನು ಸೇನಾ ಮುಕ್ತಗೊಳಿಸಲು ಮತ್ತು ಸುಂದರವಾಗಿ ಮರು ನಿರ್ಮಾಣಗೊಳ್ಳುವುದನ್ನು ಖಚಿತಪಡಿಸಲು ಶಾಂತಿ ಮಂಡಳಿ ಬದ್ಧವಾಗಿರುತ್ತದೆ. ಎಲ್ಲರೂ ಶಾಂತಿ ಮಂಡಳಿಯ ಭಾಗವಾಗಿರಲು ಬಯಸುತ್ತಾರೆ. ವಿಶ್ವಸಂಸ್ಥೆ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಟ್ರಂಪ್ ಈ ಸಂದರ್ಭ ಹೇಳಿದ್ದಾರೆ.

ಶಾಂತಿ ಮಂಡಳಿಯ ಸದಸ್ಯತ್ವಕ್ಕೆ ಆಹ್ವಾನ ಪಡೆದಿರುವ 60 ದೇಶಗಳಲ್ಲಿ 35 ದೇಶಗಳು ಯೋಜನೆಗೆ ಸಹಿ ಹಾಕಲು ಒಪ್ಪಿಕೊಂಡಿರುವುದಾಗಿ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ. 2025ರ ಅಕ್ಟೋಬರ್ 10ರಂದು ಜಾರಿಗೆ ಬಂದ ಕದನ ವಿರಾಮವು ಎರಡನೇ ಹಂತಕ್ಕೆ ಕಾಲಿಡುತ್ತಿದ್ದಂತೆಯೇ ಶಾಂತಿ ಮಂಡಳಿಯು ಗಾಝಾದ ಯುದ್ದಾನಂತರದ ಪರಿವರ್ತನೆಯನ್ನು ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿದೆ. ಗಾಝಾದಲ್ಲಿ ಹೊಸ ಫೆಲೆಸ್ತೀನಿಯನ್ ಸಮಿತಿಯ ರಚನೆ, ಅಂತಾರಾಷ್ಟ್ರೀಯ ಭದ್ರತಾ ಪಡೆಯ ನಿಯೋಜನೆ, ಹಮಾಸ್‍ನ ನಿಶಸ್ತ್ರೀಕರಣ ಮತ್ತು ಯುದ್ಧದಿಂದ ಧ್ವಂಸಗೊಂಡ ಪ್ರದೇಶದ ಪುನನಿರ್ಮಾಣದ ಜವಾಬ್ದಾರಿಯನ್ನು ಗಾಝಾ ಶಾಂತಿ ಮಂಡಳಿ ನಿರ್ವಹಿಸಲಿದೆ.

ಹಮಾಸ್‍ಗೆ ಎಚ್ಚರಿಕೆ

ದಾವೋಸ್‍ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆಯ ವೇದಿಕೆಯಲ್ಲಿ ಗಾಝಾ ಶಾಂತಿ ಮಂಡಳಿಯ ದಾಖಲೆಗೆ ಸಹಿ ಹಾಕಿದ ಬಳಿಕ ಟ್ರಂಪ್ ` ಶಸ್ತ್ರಾಸ್ತ್ರ ತ್ಯಜಿಸದಿದ್ದರೆ ತೀವ್ರ ಪರಿಣಾಮ ಎದುರಿಸಲು ಸಿದ್ಧವಾಗಿರುವಂತೆ ಹಮಾಸ್‍ಗೆ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಶಸ್ತ್ರಾಸ್ತ್ರ ತ್ಯಜಿಸಲು ಹಮಾಸ್ ಒಪ್ಪದಿದ್ದರೆ ಅವರನ್ನು ಸಮಾಧಿ ಮಾಡಲಾಗುವುದು. ಕದನ ವಿರಾಮ ಒಪ್ಪಂದವನ್ನು ಪಾಲಿಸಲು ಹಮಾಸ್ ಬದ್ಧವಾಗಿದೆಯೇ ಇಲ್ಲವೇ ಎಂಬುದು ಮುಂದಿನ ಮೂರು ದಿನಗಳೊಳಗೆ ನಮಗೆ ತಿಳಿಯುತ್ತದೆ. ಆ ಬಳಿಕ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ' ಎಂದು ಟ್ರಂಪ್ ಘೋಷಿಸಿದ್ದಾರೆ.

ಶಾಂತಿ ಮಂಡಳಿ ಸೇರುವ ಆಹ್ವಾನ ತಿರಸ್ಕರಿಸಿದ ಚೀನಾ

 ಗಾಝಾ ಶಾಂತಿ ಮಂಡಳಿಗೆ ಸೇರಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಆಹ್ವಾನವನ್ನು ಚೀನಾ ಗುರುವಾರ ತಿರಸ್ಕರಿಸಿದ್ದು, ವಿಶ್ವಸಂಸ್ಥೆಯನ್ನು ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಚೀನಾ ದೃಢವಾಗಿ ಬದ್ಧವಾಗಿದೆ ಎಂದು ತಿಳಿಸಿದೆ.

ಚೀನಾವು ಬಹುಪಕ್ಷೀಯತೆಯನ್ನು ಅನುಸರಿಸುತ್ತದೆ ಮತ್ತು ವಿಶ್ವಸಂಸ್ಥೆ ಪ್ರಧಾನವಾಗಿರುವ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ರಕ್ಷಿಸಲು ದೃಢವಾಗಿ ಬದ್ಧವಾಗಿದೆ. ಅಂತಾರಾಷ್ಟ್ರೀಯ ಭೂದೃಶ್ಯದಲ್ಲಿನ ಬದಲಾವಣೆಯನ್ನು ಲೆಕ್ಕಿಸದೆ, ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ತತ್ವಗಳಲ್ಲಿ ಬೇರೂರಿರುವ ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿಯಂತ್ರಿಸುವ ಮೂಲಭೂತ ಮಾನದಂಡಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಕ್ರಮವನ್ನು ಎತ್ತಿಹಿಡಿಯುವುದನ್ನು ಚೀನಾವು ಮುಂದುವರಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

ಸೌದಿ, ಯುಎಇ ಸೇರಿದಂತೆ ಎಂಟು ರಾಷ್ಟ್ರಗಳು ಶಾಂತಿ ಮಂಡಳಿಗೆ ಸೇರ್ಪಡೆ

ಗಾಝಾ ಶಾಂತಿ ಮಂಡಳಿಗೆ ಸೇರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಆಹ್ವಾನವನ್ನು ಯುಎಇ, ಟರ್ಕಿ, ಈಜಿಪ್ಟ್, ಜೋರ್ಡಾನ್, ಸೌದಿ ಅರೆಬಿಯಾ, ಇಂಡೋನೇಶ್ಯಾ, ಪಾಕಿಸ್ತಾನ ಮತ್ತು ಖತರ್‍ನ ವಿದೇಶಾಂಗ ಸಚಿವರು ಸ್ವಾಗತಿಸಿರುವುದಾಗಿ ವರದಿಯಾಗಿದೆ.

ಈ ರಾಷ್ಟ್ರಗಳ ವಿದೇಶಾಂಗ ಸಚಿವರು ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು ಮಂಡಳಿಗೆ ಸೇರುವ ಸಾಮೂಹಿಕ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಜಂಟಿ ಹೇಳಿಕೆಯ ಪ್ರಕಾರ, ಪ್ರತೀ ರಾಷ್ಟ್ರವೂ ಸದಸ್ಯತ್ವವನ್ನು ಅಧಿಕೃತಗೊಳಿಸಲು ಅಗತ್ಯವಿರುವ ಕಾನೂನು ಮತ್ತು ಕಾರ್ಯವಿಧಾನದ ಹಂತಗಳನ್ನು ಪೂರ್ಣಗೊಳಿಸುತ್ತವೆ. ಟ್ರಂಪ್ ನೇತೃತ್ವದ ಶಾಂತಿ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ಸಚಿವರು ಮರು ದೃಢಪಡಿಸಿದ್ದು ಗಾಝಾ ಸಂಘರ್ಷವನ್ನು ಕೊನೆಗೊಳಿಸುವ ಸಮಗ್ರ ಯೋಜನೆಗೆ ಅನುಗುಣವಾಗಿ ಪರಿವರ್ತನೆಯ ಆಡಳಿತವಾಗಿ ಶಾಂತಿ ಮಂಡಳಿಯ ಕೆಲಸವನ್ನು ಬೆಂಬಲಿಸುವ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು.

ಇಸ್ರೇಲ್ ಆಕ್ಷೇಪದ ಹೊರತಾಗಿಯೂ ಶಾಂತಿ ಮಂಡಳಿಯಲ್ಲಿ ಪಾಕ್‍ಗೆ ಸದಸ್ಯತ್ವ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಗಾಝಾ ಶಾಂತಿ ಮಂಡಳಿಯ ಸದಸ್ಯರ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಇಸ್ರೇಲ್‍ನ ಬಲವಾದ ಆಕ್ಷೇಪಣೆಯ ಹೊರತಾಗಿಯೂ ಹೆಸರಿಸಲಾಗಿದೆ.

ಶಾಂತಿ ಮಂಡಳಿಯನ್ನು ಸೇರುವಂತೆ ಪ್ರಧಾನಿ ಶಹಬಾಝ್ ಷರೀಫ್‍ಗೆ ಟ್ರಂಪ್ ನೀಡಿರುವ ಆಹ್ವಾನವನ್ನು ಒಪ್ಪಿಕೊಂಡಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಗುರುವಾರ ದೃಢಪಡಿಸಿದೆ. ಆದರೆ ಗಾಝಾಕ್ಕೆ ತುಕಡಿಯನ್ನು ರವಾನಿಸುವ ಪಾಕಿಸ್ತಾನ ಸರಕಾರದ ನಿರ್ಧಾರಕ್ಕೆ ಆಂತರಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಅಂತಿಮ ನಿರ್ಧಾರಕ್ಕೆ ಸಂಸತ್ತಿನ ಅನುಮೋದನೆಯ ಅಗತ್ಯವಿದ್ದು ರಾಜಕೀಯ ಒಮ್ಮತ ನಿರ್ಣಾಯಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News