Flydubai ಪ್ರಕರಣ | ಕ್ಯಾಪ್ಟನ್ ಮಚ್ಚರ್ ಮೇಲೆ ಹಲ್ಲೆ ನಡೆಸಿದ ಒಮಾನಿ ಪೈಲಟ್ ನೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಪೈಲಟ್ಗಳನ್ನು ಯುಎಇ ವಶಕ್ಕೆ ಪಡೆದಿದ್ದೇಕೆ?
Photo: x.com/IndianExpress
ದುಬೈ: ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಫ್ಲೈದುಬೈ ವಿಮಾನದ ಕಾಕ್ಪಿಟ್ ನಲ್ಲಿ ಕೊಡಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಲ್ಡೀವ್ಸ್ ನ ಇಬ್ಬರು ಪೈಲಟ್ ಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ದುಬೈನಿಂದ ಇಸ್ರೇಲ್ ನ ಟೆಲ್ ಅವೀವ್ ಗೆ ತೆರಳುತ್ತಿದ್ದ FZ1073 ವಿಮಾನವನ್ನು ಅಪಹರಿಸಿ ಪತನಗೊಳಿಸುವ ಸಂಚಿನ ಆರೋಪದ ತನಿಖೆಯನ್ನು ಯುಎಇ ಅಧಿಕಾರಿಗಳು ವಿಸ್ತರಿಸಿದ್ದಾರೆ.
ಸೆಪ್ಟೆಂಬರ್ 30ರಂದು ನಡೆದ ಘಟನೆಯಲ್ಲಿ, ವಿಮಾನದ ಒಮಾನಿ ಸಹ-ಪೈಲಟ್ ಹಮಮ್ ಅಲ್-ಹಮಮಿ ಎಂಬಾತ ಕಾಕ್ಪಿಟ್ ನಲ್ಲಿದ್ದ ಕೊಡಲಿಯಿಂದ ಕ್ಯಾಪ್ಟನ್ ಮಚ್ಚರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಆತನನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ಗೆ ತಿರುಗಿಸಲಾಗಿತ್ತು.
ಕುಟುಂಬಗಳಿಗೆ ಮಾಹಿತಿ
ಮಾಲ್ಡೀವ್ಸ್ ನ ಸುದ್ದಿ ಪೋರ್ಟಲ್ 'ಅಧಾಧು' ವರದಿಯ ಪ್ರಕಾರ, ಅಕ್ಟೋಬರ್ 3ರಂದು ಯುಎಇ ಪೊಲೀಸರು ಇಬ್ಬರು ಮಾಲ್ಡೀವ್ಸ್ ಪೈಲಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಯುಎಇಯಲ್ಲಿರುವ ಮಾಲ್ಡೀವ್ಸ್ ರಾಯಭಾರ ಕಚೇರಿಯು ಈ ಬಗ್ಗೆ ಅವರ ಕುಟುಂಬಗಳಿಗೆ ಮಾಹಿತಿ ನೀಡಿದೆ ಎಂದು PTI ವರದಿ ಮಾಡಿದೆ.
ಆದರೆ, ಇಬ್ಬರು ಪೈಲಟ್ ಗಳ ವಶಕ್ಕೆ ಪಡೆಯುವಿಕೆ ಕುರಿತು ಯುಎಇ ಅಧಿಕಾರಿಗಳು ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಅವರ ಹೆಸರುಗಳನ್ನೂ ಬಹಿರಂಗಪಡಿಸಿಲ್ಲ. ವಿಮಾನ ಅಪಹರಣದ ಸಂಚಿನಲ್ಲಿ ಅವರ ಪಾತ್ರವಿದೆಯೇ ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ.
ಇಬ್ಬರು ಪೈಲಟ್ ಗಳನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿದೆ ಎಂದು ಮಾಲ್ಡೀವ್ಸ್ ಸರ್ಕಾರದ ವಕ್ತಾರ ಮುಹಮ್ಮದ್ ಹುಸೇನ್ ಷರೀಫ್ ಅಕ್ಟೋಬರ್ 3ರಂದು ತಿಳಿಸಿದ್ದರು. ಆದರೆ, ಅವರನ್ನು ಬಂಧಿಸಲಾಗಿದೆ ಎಂಬ ವರದಿಗಳ ಕುರಿತು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಲು ನಿರಾಕರಿಸಿವೆ.
ಒಮಾನಿ ಸಹ-ಪೈಲಟ್ ನೊಂದಿಗೆ ಸಂಪರ್ಕ?
ಮಾಲ್ಡೀವ್ಸ್ ನ 'ಮಿಹಾರು' ಪತ್ರಿಕೆಯ ವರದಿಯ ಪ್ರಕಾರ, ವಶಕ್ಕೆ ಪಡೆಯಲಾದ ಇಬ್ಬರು ಪೈಲಟ್ ಗಳು ಹಮಮ್ ಅಲ್-ಹಮಮಿಯೊಂದಿಗೆ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕೆಲಸದ ಸ್ಥಳದಲ್ಲಿ ಆತನೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ವಿಮಾನಯಾನ ಪಾಳಿಗಳನ್ನೂ ಹಂಚಿಕೊಂಡಿದ್ದರು ಎಂದು ವರದಿಯಾಗಿದೆ.
'ಅಧಾಧು' ವರದಿಯ ಪ್ರಕಾರ, ಇಬ್ಬರು ಪೈಲಟ್ ಗಳು ಹಮಮ್ ಅಲ್-ಹಮಮಿಯನ್ನು ಕಾರ್ಪೊರೇಟ್ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ.
ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಆರು ಮಂದಿ ಮಾಲ್ಡೀವ್ಸ್ ಪೈಲಟ್ ಗಳ ಪೈಕಿ ಈ ಇಬ್ಬರೂ ಸೇರಿದ್ದಾರೆ. ಇತ್ತೀಚೆಗೆ ವಿಮಾನಯಾನ ಸಂಸ್ಥೆಗೆ ನೇಮಕಗೊಂಡ ಮಾಲ್ಡೀವ್ಸ್ ಪೈಲಟ್ ಗಳು ಇವರಾಗಿದ್ದಾರೆ ಎಂದು 'ಎಡಿಷನ್.ಎಂವಿ' ವರದಿ ಮಾಡಿದೆ.
ಆದರೆ, ಈ ಸಂಪರ್ಕಗಳೇ ಅವರ ವಶಕ್ಕೆ ಪಡೆಯುವಿಕೆಗೆ ಕಾರಣವೇ ಎಂಬುದನ್ನು ಯುಎಇ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.
ವಿಮಾನ ನಿಲ್ದಾಣದ ಟರ್ಮಿನಲ್ ಗೆ ಅಪ್ಪಳಿಸುವ ಸಂಚು
ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್ ಶಮ್ಸಿ ಅವರು ಅಕ್ಟೋಬರ್ 9ರಂದು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಹಮಮ್ ಅಲ್-ಹಮಮಿ ವಿಮಾನದ ನಿಯಂತ್ರಣವನ್ನು ವಶಪಡಿಸಿಕೊಂಡು, ಇಸ್ರೇಲ್ ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಗೆ ವಿಮಾನವನ್ನು ಅಪ್ಪಳಿಸುವ ಉದ್ದೇಶ ಹೊಂದಿದ್ದನು.
2001ರ ಸೆಪ್ಟೆಂಬರ್ 11ರಂದು ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಪ್ರೇರಿತನಾಗಿ ಈ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಎಂದು ಯುಎಇ ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ.
'ಯಾರ ಸಹಾಯವೂ ಪಡೆಯದೇ ತಾನೊಬ್ಬನೇ ಈ ಕೃತ್ಯ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ' ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಆದರೆ, ಈ ಹೇಳಿಕೆಯನ್ನು ಪರಿಶೀಲಿಸುವ ತನಿಖೆ ಮುಂದುವರಿದಿದೆ.
ಕಾಕ್ಪಿಟ್ ನಲ್ಲಿ ಹಿಂಸಾಚಾರ ನಡೆದ ಸಂದರ್ಭದಲ್ಲಿ FZ1073 ವಿಮಾನದಲ್ಲಿ 174 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.