ಶಸ್ತ್ರಚಿಕಿತ್ಸೆ ವೇಳೆ ಪೋಪ್ ಲಿಯೋಗೆ ಶ್ವಾಸಕೋಶದ ಕ್ಯಾನ್ಸರ್ ಪತ್ತೆ: ರಾಯಿಟರ್ಸ್ ವರದಿ
ಬಲ ಶ್ವಾಸಕೋಶದ ಕೆಳಭಾಗವನ್ನು ತೆಗೆದುಹಾಕಿದ ವೈದ್ಯರು
ಪೋಪ್ ಲಿಯೋ | Photo Credit : PTI
ರೋಮ್: ಪೋಪ್ ಲಿಯೋ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಶಸ್ತ್ರಚಿಕಿತ್ಸೆ ವೇಳೆ ದೃಢಪಟ್ಟಿದೆ. 71 ವರ್ಷದ ಪೋಪ್ ಅವರ ಬಲ ಶ್ವಾಸಕೋಶದ ಕೆಳಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ ಎಂದು ವ್ಯಾಟಿಕನ್ ವೈದ್ಯಕೀಯ ಬುಲೆಟಿನ್ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಪೋಪ್ ಅವರಿಗೆ ಶ್ವಾಸಕೋಶದ ಅಡಿನೊಕಾರ್ಸಿನೋಮ ಎಂಬ ಕ್ಯಾನ್ಸರ್ ಇರುವುದು ಅಂಗಾಂಶ ಪರೀಕ್ಷೆಯಿಂದ ದೃಢಪಟ್ಟಿದೆ. ಇದು ಶ್ವಾಸಕೋಶದ ಕ್ಯಾನ್ಸರ್ ನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಶಸ್ತ್ರಚಿಕಿತ್ಸೆಗೆ ಮುನ್ನ ನಡೆಸಿದ ಪರೀಕ್ಷೆಗಳಲ್ಲಿ ವೈದ್ಯರು ವ್ಯಕ್ತಪಡಿಸಿದ್ದ ಅನುಮಾನವನ್ನು ಅಂಗಾಂಶ ಪರೀಕ್ಷೆಗಳು ದೃಢಪಡಿಸಿವೆ ಎಂದು ಬುಲೆಟಿನ್ ತಿಳಿಸಿದೆ.
ಇತ್ತೀಚಿನ ಆರೋಗ್ಯ ತಪಾಸಣೆ ವೇಳೆ ಶ್ವಾಸಕೋಶದಲ್ಲಿ ಪತ್ತೆಯಾಗಿದ್ದ ಬೆಳವಣಿಗೆಯನ್ನು ತೆಗೆದುಹಾಕಲು ಮಂಗಳವಾರ ಅವರನ್ನು ರೋಮ್ ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪೋಪ್ ಅವರ ಪ್ರಮುಖ ಶಸ್ತ್ರಚಿಕಿತ್ಸಕ ಡಾ. ಸ್ಟೆಫಾನೊ ಮಾರ್ಗರಿಟೋರಾ ಮತ್ತು ವೈಯಕ್ತಿಕ ವೈದ್ಯ ಡಾ. ಲುಯಿಗಿ ಕಾರ್ಬೋನ್ ಅವರ ಪ್ರಕಾರ, ಸುಮಾರು 90 ನಿಮಿಷಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಯಾವುದೇ ತೊಡಕುಗಳಿಲ್ಲದೆ ಯಶಸ್ವಿಯಾಗಿದೆ. ಕ್ಯಾನ್ಸರ್ ಯುಕ್ತ ಅಂಗಾಂಶವನ್ನು ಸಂಪೂರ್ಣವಾಗಿ ತೆಗೆದುಹಾಕುವ ಉದ್ದೇಶದಿಂದ ವೀಡಿಯೊ ನೆರವಿನ ಶಸ್ತ್ರಚಿಕಿತ್ಸಾ ತಂತ್ರ ಬಳಸಿ ಬಲ ಶ್ವಾಸಕೋಶದ ಕೆಳಭಾಗವನ್ನು ತೆಗೆದುಹಾಕಲಾಗಿದೆ.
ಕ್ಯಾನ್ಸರ್ ಹರಡಿದೆಯೇ?
ಪೋಪ್ ಅವರಿಗೆ ಪತ್ತೆಯಾಗಿರುವ ಕ್ಯಾನ್ಸರ್ ಎಷ್ಟು ದೊಡ್ಡದಾಗಿದೆ ಮತ್ತು ದೇಹದ ಇತರ ಭಾಗಗಳಿಗೆ ಹರಡಿದೆಯೇ ಎಂಬುದನ್ನು ತಿಳಿದ ಬಳಿಕವಷ್ಟೇ ಅವರ ಆರೋಗ್ಯದ ಸ್ಥಿತಿಯನ್ನು ಅಂದಾಜಿಸಲು ಸಾಧ್ಯ. ಈ ಬಗ್ಗೆ ವ್ಯಾಟಿಕನ್ ಯಾವುದೇ ಮಾಹಿತಿ ನೀಡಿಲ್ಲ.
'ಕ್ಯಾನ್ಸರ್ ಇರುವುದು ದೃಢಪಟ್ಟಿದ್ದರೂ, ಅದು ಯಾವ ಹಂತದಲ್ಲಿದೆ ಎಂಬುದು ಇನ್ನೂ ತಿಳಿದಿಲ್ಲ. ಚಿಕಿತ್ಸೆಯ ಸ್ವರೂಪ ಮತ್ತು ರೋಗದ ಮುನ್ನರಿವು ನಿರ್ಧರಿಸಲು ಈ ಮಾಹಿತಿ ನಿರ್ಣಾಯಕವಾಗಿದೆ' ಎಂದು ವಾಷಿಂಗ್ಟನ್ನ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಶ್ವಾಸಕೋಶದ ಕ್ಯಾನ್ಸರ್ ತಜ್ಞ ಹಾಗೂ ಮೆಡ್ಸ್ಟಾರ್ ಜಾರ್ಜ್ಟೌನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಹೆಮಟಾಲಜಿ-ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಸ್ಟೀಫನ್ ಲಿಯು ಹೇಳಿದ್ದಾರೆ.
''ಕ್ಯಾನ್ಸರ್ ದುಗ್ಧರಸ ಗ್ರಂಥಿಗಳಿಗೆ ಹರಡಿಲ್ಲದಿದ್ದರೆ, ಶಸ್ತ್ರಚಿಕಿತ್ಸೆಯಿಂದಲೇ ಗುಣಪಡಿಸುವ ಸಾಧ್ಯತೆಯಿದೆ. ಆದರೆ, ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಹರಡಿರುವುದು ಪರೀಕ್ಷೆಯಲ್ಲಿ ದೃಢಪಟ್ಟರೆ, ಪೋಪ್ ಅವರ ಆರೋಗ್ಯದ ಬಗ್ಗೆ ಆತಂಕ ಹೆಚ್ಚಬಹುದು' ಎಂದು ಅವರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮಗಳು ರದ್ದು
ಶಸ್ತ್ರಚಿಕಿತ್ಸೆಯ ಬಳಿಕ ಪೋಪ್ ಸಹಜವಾಗಿಯೇ ಪ್ರಜ್ಞೆ ಮರಳಿ ಪಡೆದಿದ್ದು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಬುಲೆಟಿನ್ ತಿಳಿಸಿದೆ. ಅವರು ಸುಮಾರು ಒಂದು ವಾರ ಆಸ್ಪತ್ರೆಯಲ್ಲೇ ಉಳಿಯಬೇಕಾಗಬಹುದು. ಅಕ್ಟೋಬರ್ 20ರವರೆಗೆ ನಿಗದಿಯಾಗಿದ್ದ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ವ್ಯಾಟಿಕನ್ ತಿಳಿಸಿದೆ.
ಶಸ್ತ್ರಚಿಕಿತ್ಸೆಗಾಗಿ ತೆರಳುವ ಮುನ್ನ ರೋಮ್ನಲ್ಲಿರುವ ವ್ಯಾಟಿಕನ್ ನಿಂದ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹೊರಟಿದ್ದ ಪೋಪ್, ಸುಮಾರು 9 ಕಿ.ಮೀ. ದೂರದಲ್ಲಿರುವ ಜೆಮೆಲ್ಲಿ ಆಸ್ಪತ್ರೆಗೆ ತೆರಳುವಾಗ ಕಪ್ಪು ಬಣ್ಣದ ಎಸ್ಯುವಿ ವಾಹನದ ಹಿಂಬದಿಯಿಂದ ಜನರತ್ತ ಕೈಬೀಸಿದರು.
ಆಸ್ಪತ್ರೆಗೆ ಬಂದಿಳಿದ ಬಳಿಕ ಅಧಿಕಾರಿಗಳೊಂದಿಗೆ ಕೈಕುಲುಕಿದ ಅವರು, ಶುಭ ಹಾರೈಸಲು ಕಾಯುತ್ತಿದ್ದ ಜನರ ಗುಂಪಿನ ಮುಂದೆ ನಡೆದು ಮುಖ್ಯ ದ್ವಾರದ ಮೂಲಕ ಒಳಪ್ರವೇಶಿಸಿದರು. ಈ ಸಂದರ್ಭದಲ್ಲಿ ಕೆಲವರು ಶುಭಾಶಯಗಳು ಎಂದು ಕೂಗಿದರು.
2025ರ ಮೇನಲ್ಲಿ ಕಾರ್ಡಿನಲ್ ಗಳು ಲಿಯೋ ಅವರನ್ನು ಪೋಪ್ ಆಗಿ ಆಯ್ಕೆ ಮಾಡಿದ್ದರು. 71 ವರ್ಷದ ಲಿಯೋ, ಚರ್ಚ್ ನ ಹಿರಿಯ ನಾಯಕರಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಿರಿಯರು. ಅವರಿಗೆ ಟೆನಿಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಆಸಕ್ತಿಯಿದೆ. ಅವರು ಧೂಮಪಾನ ಮಾಡುವುದಿಲ್ಲ. ಇತ್ತೀಚಿನವರೆಗೂ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ ಎಂದು ವರದಿ ತಿಳಿಸಿದೆ.
ಪೋಪ್ ಲಿಯೋ ಅವರಿಗಿಂತ ಮೊದಲು ಹಿಂದಿನ ಪೋಪ್ ಆಗಿದ್ದ ಫ್ರಾನ್ಸಿಸ್ ಅವರು ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದರು. ಈ ಕಾರಣದಿಂದ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು 2025ರ ಏಪ್ರಿಲ್ನಲ್ಲಿ 88ನೇ ವಯಸ್ಸಿನಲ್ಲಿ ನಿಧನರಾದರು.
ಸೋಮವಾರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೋಪ್ ಲಿಯೋ ಸ್ಪಷ್ಟವಾಗಿ ಮಾತನಾಡಿದ್ದರು. ನವೆಂಬರ್ 6ರಿಂದ 17ರವರೆಗೆ ಉರುಗ್ವೆ, ಅರ್ಜೆಂಟೀನಾ ಮತ್ತು ಪೆರು ದೇಶಗಳಿಗೆ 11 ದಿನಗಳ ಪ್ರವಾಸ ಕೈಗೊಳ್ಳಲು ಅವರು ಯೋಜಿಸಿದ್ದರು. ಆದರೆ, ಈಗ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗಿರುವುದರಿಂದ ಈ ಪ್ರವಾಸ ಕೈಗೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಹಿಂದೆ ಟೈಫಾಯಿಡ್ ಜ್ವರದಿಂದ ಬಳಲಿದ್ದರು
1955ರಲ್ಲಿ ಅಮೆರಿಕದ ಚಿಕಾಗೋದಲ್ಲಿ ರಾಬರ್ಟ್ ಪ್ರಿವೋಸ್ಟ್ ಎಂಬ ಹೆಸರಿನಲ್ಲಿ ಜನಿಸಿದ ಲಿಯೋ, ಪೋಪ್ ಆಗುವ ಮೊದಲು ಪೆರುವಿನಲ್ಲಿ ಹಲವು ದಶಕಗಳ ಕಾಲ ಮಿಷನರಿ ಮತ್ತು ಬಿಷಪ್ ಆಗಿ ಸೇವೆ ಸಲ್ಲಿಸಿದ್ದರು.
1985ರಲ್ಲಿ ಯುವ ಧರ್ಮಗುರುವಾಗಿದ್ದಾಗ ಪೆರುವಿನ ಚುಲುಕಾನಾಸ್ ನಲ್ಲಿ ಟೈಫಾಯಿಡ್ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪೋಪ್ ಆಗಿ ನೀಡಿದ ತಮ್ಮ ಏಕೈಕ ಪ್ರಮುಖ ಸಂದರ್ಶನದಲ್ಲಿ, ಪೆಂಗ್ವಿನ್ ಪೆರು ಪ್ರಕಟಿಸಿದ ಪುಸ್ತಕವೊಂದರಲ್ಲಿ ಈ ಅನುಭವವನ್ನು ವಿವರಿಸಿದ್ದರು.
ಆ ಸಂದರ್ಭದಲ್ಲಿ ಅನುಭವಿಸಿದ ನೋವು ಎಷ್ಟು ತೀವ್ರವಾಗಿತ್ತೆಂದರೆ, ಆ ಯಾತನೆಯೊಂದಿಗೆ ಬದುಕುವುದಕ್ಕಿಂತ ಸಾವನ್ನೇ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾಗಿ ಲಿಯೋ ಹೇಳಿದ್ದರು. ಆದರೆ, ತಾವು ಬದುಕುಳಿದಿದ್ದನ್ನು 'ಭೂಮಿಯ ಮೇಲೆ ನಮಗೆ ನಿಮ್ಮ ಅಗತ್ಯವಿದೆ' ಎಂಬ ದೇವರ ಸಂದೇಶವೆಂದು ಪರಿಗಣಿಸಿದ್ದಾಗಿ ಅವರು ತಿಳಿಸಿದ್ದರು.
'ನಾನು ಎಂದಿಗೂ ಹಿಂದಿರುಗಿ ನೋಡಲಿಲ್ಲ' ಎಂದು ಲಿಯೋ ಹೇಳಿದ್ದರು.