Photo Credit : aljazeera.com

ಕೈರೋ: ಯಮನ್‌ನ ಮೂರನೇ ಅತಿ ದೊಡ್ಡ ನಗರ ತೈಝ್‌ಗೆ ಮುತ್ತಿಗೆ ಹಾಕಲು ಹೌತಿ ಬಂಡುಕೋರರು ಮುನ್ನುಗ್ಗುತ್ತಿದ್ದು, ಹತ್ತು ಲಕ್ಷಕ್ಕೂ ಅಧಿಕ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು, ಇತ್ತೀಚೆಗೆ ಯಮನ್‌ನ ಪ್ರಮುಖ ಪಟ್ಟಣವಾದ ‘ತುರ್ಬ’ ಪಟ್ಟಣವನ್ನು ವಶಪಡಿಸಿಕೊಂಡಿದ್ದರು. ಅದನ್ನು ಸರಕಾರದ ಸ್ವಾಧೀನದಲ್ಲಿರುವ ಪ್ರದೇಶಗಳಿಂದ ಪ್ರತ್ಯೇಕಗೊಳಿಸಿದ್ದಾರೆ.

ತೈಝ್ ನಗರದ ಮೇಲೆ ಹೌತಿ ಬಂಡುಕೋರರು ಮುತ್ತಿಗೆ ಹಾಕುವ ಸಾಧ್ಯತೆಯು ದಟ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಆಹಾರ, ನೀರು ಸೇರಿದಂತೆ ಅತ್ಯಾವಶ್ಯಕ ಸಾಮಾಗ್ರಿಗಳನ್ನು ದಾಸ್ತಾನು ಮಾಡಲು ಅಂಗಡಿಮಳಿಗೆಗಳ ಮುಂದೆ ಜಮಾಯಿಸಿರುವ ದೃಶ್ಯಗಳು ಕಂಡುಬಂದಿವೆ. ಇದರಿಂದಾಗಿ ಡೀಸೆಲ್ ಇಂಧನ ಹಾಗೂ ಅಡುಗೆ ಅನಿಲ ಮತ್ತಿತರ ಸಾಮಾಗ್ರಿಗಳ ಅಭಾವ ಉಂಟಾಗಿದ್ದು, ಕೆಲವರು ಅಡುಗೆಗಾಗಿ ಕಾರ್ಡ್‌ಬೋರ್ಡ್‌ಗಳನ್ನು ಹಾಗೂ ಮರಮಟ್ಟುಗಳನ್ನು ಉರಿಸುತ್ತಿದ್ದಾರೆಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

12 ವರ್ಷಗಳ ಕಾಲ ನಡೆದ ಅಂತರ್ಯುದ್ಧದಲ್ಲಿ ನರಳಿದ ತೈಝ್‌ ನಗರವು, 2022ರಲ್ಲಿ ಕದನವಿರಾಮ ಜಾರಿಗೊಂಡ ಬಳಿಕ ಕೊಂಚ ಚೇತರಿಸಿಕೊಂಡಿದ್ದ ಈ ನಗರದಲ್ಲಿ ಇದೀಗ ಮತ್ತೆ ಯುದ್ಧದ ಕಾರ್ಮೋಡ ನೆಲೆಸಿದೆ. ಆಗಸ್ಟ್‌ನಲ್ಲಿ ಹೊಸ ದಾಳಿಯನ್ನು ಆರಂಭಿಸಿದ ಹೌತಿಗಳು ತೈಝ್ ಪಟ್ಟಣವನ್ನು ವಶಪಡಿಸಿಕೊಳ್ಳುವ ಮೂಲಕ ತೈಝ್ ನಗರದ ಸುತ್ತಲೂ ದಿಗ್ಬಂಧನ ವಿಧಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಔಷಧಗಳು ಸೇರಿದಂತೆ ವೈದ್ಯಕೀಯ ಸಾಮಾಗ್ರಿಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಹೌತಿಗಳು ಹಾಗೂ ಸರಕಾರಿ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದೆ. ಯಾವುದೇ ಕ್ಷಣದಲ್ಲಿ ನಗರದ ಮೇಲೆ ಬಾಂಬ್ ದಾಳಿ ನಡೆಯುವ ಭೀತಿ ಜನರಲ್ಲಿ ಮನೆ ಮಾಡಿದೆಯೆಂದು ವರದಿಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor