‘ನೀನೊಬ್ಬ ಭಯೋತ್ಪಾದಕ’: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಯೂನುಸ್ ಗೆ ಪ್ರತಿಭಟನಾಕಾರರ ಘೇರಾವ್
ಕಾನೂನು ಕ್ರಮದ ಭರವಸೆ ನೀಡಿದ ಬಾಂಗ್ಲಾದೇಶ ಸರಕಾರ
ಮುಹಮ್ಮದ್ ಯೂನುಸ್ | Photo Credit : Video grab
ನ್ಯೂಯಾರ್ಕ್, ಅ.13: ‘ನೀನೊಬ್ಬ ಭಯೋತ್ಪಾದಕ’, ‘ನೀನೇಕೆ ಇಲ್ಲಿಗೆ ಬಂದೆ?’ ಎಂದು ಪ್ರತಿಭಟನಾಕಾರರ ಗುಂಪೊಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮಾಜಿ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ವೀಲ್‌ಚೇರ್ ನಲ್ಲಿ ಕುಳಿತಿದ್ದ ಯೂನುಸ್ ಅವರನ್ನು ಕೆಲವರು ಸುತ್ತುವರಿದು ಘೋಷಣೆಗಳನ್ನು ಕೂಗುತ್ತಿರುವುದು ಸೆರೆಯಾಗಿದೆ. ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಹಾಳುಗೆಡವಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮಧ್ಯಂತರ ಸರಕಾರದ ಮುಖ್ಯಸ್ಥರಾಗಿದ್ದಾಗ ದೇಶವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಅಕ್ಟೋಬರ್ 13ರಂದು ಭದ್ರತಾ ಸಿಬ್ಬಂದಿ ಹಾಗೂ ಸಹಚರರೊಂದಿಗೆ ವಿಮಾನ ನಿಲ್ದಾಣದಿಂದ ಹೊರಟಿದ್ದ ಯೂನುಸ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು ಎಂದು ದಿ ಟ್ರಿಬ್ಯೂನ್ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿವೆ. ಆದರೆ, ವಿಡಿಯೊ ದೃಶ್ಯಾವಳಿಗಳಿಂದ ಪ್ರತಿಭಟನಾಕಾರರ ಗುರುತು ಹಾಗೂ ಅವರು ಯಾವ ಗುಂಪಿಗೆ ಸೇರಿದವರು ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಘಟನೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶ ಸರಕಾರ, ಕಿರುಕುಳದ ಆರೋಪದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ಯೂನುಸ್ ಅವರಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆಗಳನ್ನು ಪರಾಮರ್ಶಿಸುವುದಾಗಿ ಭರವಸೆ ನೀಡಿದೆ.
ಕಳೆದ ತಿಂಗಳು ಇಟಲಿಯಲ್ಲಿ ನಟಿ ಅಝ್ಮೇರಿ ಹಕ್ ಬಧೋನ್ ಅವರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಕೈಗೊಂಡಿದ್ದ ಕ್ರಮಗಳ ಮಾದರಿಯಲ್ಲೇ ಈ ಪ್ರಕರಣದಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಬಾಂಗ್ಲಾದೇಶದ ಪ್ರಧಾನಿಯ ಮಾಹಿತಿ ಮತ್ತು ಪ್ರಸಾರ ಸಲಹೆಗಾರ ಝಾಹೇದ್ ಉರ್ ರಹ್ಮಾನ್ ತಿಳಿಸಿದ್ದಾರೆ. ಮಂಗಳವಾರ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಅವರು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು ಎಂದು ದಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.